ಸಮಾಜಕ್ಕೆ ಕೊಡುಗೆ ನೀಡುವಲ್ಲಿ ನಾಯಕ ಜನಾಂಗ ಮುಂದಾಗಲಿ
ಹುಳಿಯಾರು: ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಅಧ್ಯಾಯವನ್ನು ಹೊಂದಿರುವ ನಾಯಕ ಸಮುದಾಯ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ. ಇಂತಹ ಸಮುದಾಯದವರಾದ ನಾವು ಇಂದು ಸಮಾಜಸೇವೆಯಲ್ಲಿ ಮುಂದಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗಬೇಕಿದೆ ಎಂದು ಬಿಎಸ್ಆರ್ ಪಕ್ಷದ ಜಿಲ್ಲಾ ಮುಖಂಡ ರಾಮಾಂಜನೇಯ ತಿಳಿಸಿದರು. ಹುಳಿಯಾರು ಹೋಬಳಿ ವಾಲ್ಮೀಕಿ ನಾಯಕ ಸಂಘದವತಿಯಿಂದ ಎಂಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಪುಣ್ಯಾನಂದಪುರಿ ಮಹಾಸ್ವಾಮಿಗಳ ಸ್ಮರಣೆ ಮತ್ತು ಗುರುವಂದನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಪಾಶ್ಚಾತ್ಯರನ್ನು ಬಗ್ಗು ಬಡಿದು ನಮ್ಮ ನಾಡನ್ನು ರಕ್ಷಿದ ಮದಕರಿನಾಯಕ, ಸಂಗೊಳ್ಳಿರಾಯಣ್ಣ ಸೇರಿದಂತೆ ಇತರ ವ್ಯಕ್ತಿಗಳ ಆದರ್ಶಪಾಲನೆ ಪ್ರಸ್ತುತ ಅಗತ್ಯವಿದ್ದು, ಸಮುದಾಯದ ಪ್ರತಿಯೊಬ್ಬರ ಮಕ್ಕಳು ಉತ್ತಮ ಶಿಕ್ಷಣ ಪಡೆದು, ಶಿಕ್ಷಿತರಾಗಿ, ಸಹಕಾರ, ಸಹಾನುಭೂತಿ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಾಯಕ ಸಮುದಾಯದ ಹೆಸರು ಉಳಿಸುವ ಕಾರ್ಯ ಮಾಡಬೇಕಿದೆ ಎಂದರು. ಶೌರ್ಯಕ್ಕೆ ಹೆಸರಾದ ನಾಯಕ ಸಮುದಾಯದ ಬಗ್ಗೆ ಸರಕಾರ ಹೆಚ್ಚಿನ ಸವಲತ್ತು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯವಹಿಸಿ, ಆಶಿರ್ವಚನ ನೀಡಿದರು. ಹುಳಿಯಾರು ಹೋಬಳಿ ವಾಲ್ಮೀಕಿ ಸಂಘದ ಅಧ್ಯಕ್ಷ ದುರ್ಗರಾಜು ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ರೇಣುಕಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಕಸಾಪ ಅಧ್ಯಕ್ಷ ರವಿಕುಮಾರ್ ಏಕಲವ್ಯ ಭಾವಚಿತ್ರ ಅನಾವರಣ ಮಾಡಿದರು. ಸಿಂಗದಹಳ್ಳಿ ರಾಜ್ಕುಮಾರ್, ಆದಾಯ ತೆರಿಗೆ ಇಲಾಖೆಯ ದೊಡ್ಡರಂಗಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಸೀತಾರಾಂ, ಜಿಲ್ಲಾ ಪರಿಶಿಷ್ಟ ಪಂಗಡಗಳ ವಿಭಾದ ಅಧ್ಯಕ್ಷ ತು.ಬಿ. ಮಲ್ಲೇಶ್, ಚಿ.ನಾ.ಹಳ್ಳಿ ಸರ್ಕಾರಿ ನೌಕರ ಸಂಘದ ನಿರ್ದೇಶಕ ಕುಮಾರಸ್ವಾಮಿ, ವಾಲ್ಮೀಕಿ ಸಂಘದ ಗೌರವಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ರಾಮದಾಸೇಗೌಡ, ನಂದಿಹಳ್ಳಿ ಶಿವಣ್ಣ, ಕೆಂಕೆರೆ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ, ಹುಳಿಯಾರ್ ಗ್ರಾಪಂ ಸದಸ್ಯೆ ದ್ರಾಕ್ಷಾಯಿಣಿ ಸೇರಿದಂತೆ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ ಕತ್ತಿವರಸೆ, ವಾಲ್ಮೀಕಿಯ ಸ್ತಬ್ಧಚಿತ್ರಗಳು ಉತ್ಸವಕ್ಕೆ ಮೆರಗು ನೀಡಿತ್ತು.