ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಹೊನಲು ಬೆಳಕಿನ ಕಬಡ್ಡಿ
ದೊಡ್ಡಬಳ್ಳಾಪುರ: ಇಂದಿಗೂ ಕೂಡ ಗ್ರಾಮೀಣ ಪ್ರದೇಶದ ಯುವಕರ ಪ್ರೀತಿಯ ಕ್ರೀಡೆಯಾಗಿ ಕಬಡ್ಡಿ ಉಳಿದುಕೊಂಡು ಬಂದಿದೆ. ಆದರೆ ಸರ್ಕಾರದ ಪ್ರೋತ್ಸಾಹ ಇಲ್ಲದಾಗಿದೆ ಎಂದು ಹುಲುಕುಡಿ ಶ್ರೀವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆರ್.ಡಿ. ನರಸಿಂಹಯ್ಯ ಹೇಳಿದರು.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಲುಕುಡಿ ಶ್ರೀಕ್ಷೇತ್ರದ ಶ್ರೀವೀರಭದ್ರಸ್ವಾಮಿ ಯುವ ವೇದಿಕೆ ವತಿಯಿಂದ ಕಾರ್ತೀಕ ಮಾಸದ ಅಂಗವಾಗಿ ನಡೆದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತ
ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ದೇಸೀ ಕ್ರೀಡೆಯಾಗಿರುವ ಕಬಡ್ಡಿಯನ್ನು ತಾಲೂಕು ಮಟ್ಟದ ವಿವಿಧ ಸಂಘ-ಸಂಸ್ಥೆಗಳು ಪ್ರೋತ್ಸಾಹಿಸುವ ಮೂಲಕ ಯುವಕರಿಗೆ ಉತ್ತೇಜನ ನೀಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕಬಡ್ಡಿ ಇಂದಿಗೂ ಜನಪ್ರಿಯ ಕ್ರೀಡೆಯಾಗಿ ಉಳಿದುಕೊಂಡಿರುವುದು ವಿಶೇಷ. ಕ್ರಿಕೆಟ್ ಭರಾಟೆಯಲ್ಲಿ ಹಲವಾರು ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವುದು ಆತಂಕಕಾರಿ ಎಂದರು. ದೊಡ್ಡಬೆಳವಂಗಲ ತಂಡ ಪ್ರಶಸ್ತಿ ಪಡೆಯಿತು. ಎಸ್.ಎಸ್.ಘಾಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಪದ್ಮನಾಥ, ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಉಪಾಧ್ಯಕ್ಷ ಶಿವಕುಮಾರ್, ಜಿ.ಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ಯುವ ವೇದಿಕೆಯ ಕೀರ್ತಿಗೌಡ, ಲಿಂಗಾಪುರ ಬಾಬು ಮತ್ತಿತರರು ಭಾಗವಹಿಸಿದ್ದರು.