ಕಾರ್ಪೋರೇಟ್ ವಲಯದಲ್ಲಿ ಕನ್ನಡ ಕಡೆಗಣನೆ
ಚನ್ನಪಟ್ಟಣ: ಪ್ರಾಧಿಕಾರ, ಕಾವಲು ಸಮಿತಿ ಹೀಗೆ ಹತ್ತು ಹಲವು ಸಮಿತಿಗಳನ್ನು ರಚಿಸಿಕೊಂಡು ಕನ್ನಡ ಉಳಿಸುವ ಸಂದಿಗ್ಧ ಕಾಲದಲ್ಲಿ ಕಾರ್ಪೋರೇಟ್ ವಲಯದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಇದು ಕನ್ನಡದ ಮೇಲೆ ಕನ್ನಡ ನೆಲದಲ್ಲೇ ನಡೆಯುತ್ತಿರುವ ದೌರ್ಜನ್ಯ ಎಂದು ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ವಿಷಾದಿಸಿದರು.
ತಾಲೂಕು ಸಾಹಿತ್ಯ ಪರಿಷತ್ತು ಹಮ್ಮಿ ಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ನೆಲದಲ್ಲಿ ಎಲ್ಲಾ ಅಗತ್ತ ಸವಲತ್ತುಗಳನ್ನು ಪಡೆದು ದುಂಡಗಾಗಿರುವ ಕಾರ್ಪೋರೇಟ್ ಜಗತ್ತು ಇದಕ್ಕೆಲ್ಲ ಕಾರಣವಾದ ಕನ್ನಡ ಭಾಷೆಯನ್ನು ಮಾತ್ರ ಕಡೆಗಣಿಸುತ್ತಿದೆ ಎಂದರು.
ಕನ್ನಡವನ್ನು ಸಮಗ್ರವಾಗಿ ಕಟ್ಟುವ ಕೆಲಸ ನಡೆಯುತ್ತಿಲ್ಲ, ಕನ್ನಡವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಂತೆ ಇನ್ನಿತರ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿಲ್ಲ ಎಂದ ಅವರು, ವೈದ್ಯಕೀಯ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಇಂದಿಗೂ ಕನ್ನಡ ಪಠ್ಯವನ್ನು ಕೊಟ್ಟಿಲ್ಲ, ಕಾರ್ಪೋರೇಟ್ ವಲಯ ನಮ್ಮ ಔದ್ಯಮಿಕ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದರು.
ಕನ್ನಡ ಕಟ್ಟುವ ಕೆಲಸ: ಇತ್ತೀಚಿನ ದಿನಗಳಲ್ಲಿ ಕನ್ನಡಿಗರಿಗೆ ಕೇವಲ ಭಾಷೆಯ ಸಮಸ್ಯೆ ಮಾತ್ರವಲ್ಲ. ಬದುಕಿನ ಸಮಸ್ಯೆಗಳು ಎದುರಾಗುತ್ತಿವೆ. ನಮ್ಮನ್ನಾಳಲು ಬಂದ ಆಂಗ್ಲರು ನಮ್ಮ ಭಾಷೆಯ ಬಗ್ಗೆ ಆಸಕ್ತಿ ಹುಟ್ಟಿಸಿದರು. ಆಂಗ್ಲ ವಿದ್ವಾಂಸರಾದ ಕಿಟಲ್, ಬಿ.ಎಲ್.ರೈಸ್, ಮೌಗ್ಲಿಂಗ್‌ರಂತಹ ಮಹನೀಯರು ಕನ್ನಡ ಕಟ್ಟುವ ಕೆಲಸ ಮಾಡಿದರು. ಇಂದು ನಮ್ಮ ಲೋಪದೋಷವೇ ನಮ್ಮ ಭಾಷೆಯನ್ನು ಮುಳುಗಿಸುತ್ತಿದೆ ಎಂದು ಎಚ್ಚರಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರೊ.ಕೆ.ಮಲ್ಲಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡಿನ ಶ್ರೇಯೋಭಿವೃದ್ಧಿಗಾಗಿ ಸಂಘ-ಸಂಸ್ಥೆಗಳು ಕಟಿಬದ್ಧವಾಗಿ ನಿಂತಿರುವುದು ಸಂತಸದ ಸಂಗತಿ. ಸಂಘಟಿತ ಹೋರಾಟದ ಮುಖೇನ ನಮ್ಮ ನಾಡು ನುಡಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಕನ್ನಡ ಮನಸ್ಸುಗಳು ಒಂದಾದರೆ ಈ ಕೆಲಸ ಸುಲಭ ಸಾಧ್ಯ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸು.ತ.ರಾಮೇಗೌಡ, ಹಿರಿಯ ಸಾಹಿತಿ ಡಾ.ಅಪ್ಪಗೆರೆ ವೆಂಕಟಯ್ಯ, ಮುಖಂಡ ಎಂ.ಎ.ಆನಂದ್, ಟಿ.ಎಸ್.ಚಿಕ್ಕರಾಮಕೃಷ್ಣಪ್ಪ ಮಾತನಾಡಿದರು. ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ, ರೈತಪರ ಹೋರಾಟಗಾರ ಸಿ.ಪುಟ್ಟಸ್ವಾಮಿ, ಕನ್ನಡ ಪ್ರಾಧ್ಯಾಪಕ ಡಾ.ಮಧುಸೂಧನಾಚಾರ್ಯಜೋಷಿ, ಸಾಹಿತಿ ಮತ್ತೀಕೆರೆ ಬಿ.ಚಲುವರಾಜು ಹಾಗೂ ಹಿರಿಯ ರಂಗಭೂಮಿ ನಿರ್ದೇಶಕ ಸೀಬನಹಳ್ಳಿ ಸ್ವಾಮಿರನ್ನು ಸನ್ಮಾನಿಸಲಾಯಿತು. ನೃತ್ಯಗುರು ಸುಜೇಂದ್ರಬಾಬು ತಂಡದವರು ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು. ತಾಲೂಕಿನ ಗಾಯಕರು ಸುಗಮ ಸಂಗೀತ ನಡೆಸಿಕೊಟ್ಟರು. ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಪ್ರಾಸ್ತಾವಿಕ ನುಡಿಗಳನ್ನಾಡಿದರೆ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಗೌರವಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ಸ್ವಾಗತಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಸಿ.ರಾಜಶೇಖರ್ ನಿರೂಪಿಸಿದರು. ವಿಜಯ್ ರಾಂಪುರ ವಂದಿಸಿದರು.