ಜಾಮೀನು ಸಿಗಲು ಪೊಲೀಸ್ ಸಹಕಾರ
ರಾಮನಗರ: ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳಿಂದ ಪ್ರಲೋಭನೆಗೊಳಗಾದ ಪೊಲೀಸರು ಕನಿಷ್ಠ ಪ್ರಮಾಣದ ಐಪಿಸಿ ಸೆಕ್ಷನ್ಗಳನ್ನು ವಿಧಿಸುವ ಮೂಲಕ ಆರೋಪಿಗಳಿಗೆ ಜಾಮೀನು ದೊರೆಯಲು ಸಹಕರಿಸಿದ್ದಾರೆ ಎಂದು ಆರೋಪಿಸಿ ತಾಲೂಕಿನ ತುಂಬೇನಹಳ್ಳಿ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಸ್ಪಿ ಅನುಪಮ್ ಅಗ್ರವಾಲ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ತುಂಬೇನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅ.17ರಂದು ನಾಗರಾಜಯ್ಯ, ಜಯಮ್ಮ, ನಾಗೇಂದ್ರ ಅವರಿಗೆ ಸಿ.ರೇವಣ್ಣ ಸೇರಿದಂತೆ ಇತರೆ 11 ಮಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಸಂಬಂಧ ಹಲ್ಲೆಗೊಳಗಾದ ನಾಗರಾಜಯ್ಯ ಅವರ ಮಗ ನಾಗೇಂದ್ರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರೂ ಕೂಡ ಪಿಎಸ್ಐ ವಸಂತ್ ಕುಮಾರ್ ಅವರು ಲಂಚ ಪಡೆದು, ಕನಿಷ್ಠ ಸೆಕ್ಷನ್ಗಳನ್ನು ಹಾಕಿ ಆರೋಪಿಗಳಿಗೆ ಜಾಮೀನು ಸಿಗುವಂತೆ ನೋಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆರೋಪ: ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳು ನೀಡಿದ ಹೇಳಿಕೆಯಂತೆ ಪೊಲೀಸರು ದೂರು ದಾಖಲಿಸಿಲ್ಲ. ಗಾಯಾಳು ನಾಗರಾಜಯ್ಯ ಅವರ ಮಗ ನಾಗೇಂದ್ರ ಅವರನ್ನು ಠಾಣೆಗೆ ಕರೆಸಿಕೊಂಡು, ಅವರೇ ದೂರು ಬರೆದು ನಾಗೇಂದ್ರ ಅವರಿಂದ ಸಹಿ ಪಡೆದು, ದೂರು ದಾಖಲಿಸಿಕೊಂಡಿದ್ದಾರೆ ಎಂದು ದೂರಿದರು.
ಇದರಿಂದಾಗಿ ಗ್ರಾಮದಲ್ಲಿ ಸಿ.ರೇವಣ್ಣ ಮತ್ತು ಸಹಚರರ ದಬ್ಬಾಳಿಕೆ, ದೌರ್ಜನ್ಯ ಅತಿಯಾಗಿದೆ. ಹಾಡ ಹಗಲೇ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿರುವ ಇವರನ್ನು ಪೊಲೀಸರೇ ರಕ್ಷಿಸುತ್ತಿದ್ದಾರೆ. ಇದರಿಂದ ಪ್ರೇರೇಪಿತರಾದ ಇವರು ಗ್ರಾಮದಲ್ಲಿ ದುಂಡಾವರ್ತಿ ನಡೆಸುತ್ತಿದ್ದಾರೆ ಎಂದರು.
ಭಯದ ವಾತಾವರಣ: ಈ ಎಲ್ಲಾ ಘಟನೆಯಿಂದ ಬೇಸತ್ತ ಗ್ರಾಮಸ್ಥರು ಡಿವೈಎಸ್ಪಿ ರಾಮಲಿಂಗಪ್ಪ ಅವರಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಎಸ್ಐ ವಸಂತ್ ಕುಮಾರ್ ಐಪಿಸಿ ಸೆಕ್ಷನ್ 307ರ ಪ್ರಕಾರ ಮೊಕದ್ದಮೆ ದಾಖಲಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ, ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ. ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಆರೋಪಿಗಳ ರಕ್ಷಣೆಗೆ ನಿಂತಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.
ಅಮಾನತುಗೊಳಿಸಿ: ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ವಿಫಲವಾಗಿರುವ ಎಸ್ಐ ವಸಂತ ಕುಮಾರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಪ್ರಕರಣದ ತನಿಖೆಯನ್ನು ಬೇರೊಬ್ಬ ಅಧಿಕಾರಿಗೆ ವಹಿಸಬೇಕು. ಅ.17ರಂದು ನಾಗರಾಜಯ್ಯ ಆಸ್ಪತ್ರೆಯಲ್ಲಿ ನೀಡಿದ್ದ ಹೇಳಿಕೆಯನ್ನಾಧರಿಸಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಎಸ್ಪಿ ಅನುಪಮ್ ಅಗ್ರವಾಲ್ ಅವರು ಪ್ರಕರಣದ ತನಿಖೆಯನ್ನು ಸಿಪಿಐ ಅನಿಲ್ಕುಮಾರ್ ಅವರು ನಡೆಸುವಂತೆ ಸ್ಥಳದಲ್ಲೇ ಆದೇಶಿಸಿದರು. ಗಾಯಾಳು ನಾಗರಾಜಯ್ಯ ಅವರ ಹೇಳಿಕೆಯಂತೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.
ಶಾಂತಿ ಸಭೆ ಭರವಸೆ: ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಿಎಸ್ಐ ಅವರ ಕರ್ತವ್ಯ ಲೋಪ ಕುರಿತಂತೆ ಡಿವೈಎಸ್ಪಿ ರಾಮಲಿಂಗಪ್ಪ ಅವರಿಂದ ಆಂತರಿಕ ತನಿಖೆ ನಡೆಸಲಾಗುವುದು. ತುಂಬೇನಹಳ್ಳಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ರೈತ ಪ್ರಮುಖಂಡರಾದ ಸಂಪತ್, ಕೃಷ್ಣಪ್ಪ, ಎಂ.ಪುಟ್ಟಸ್ವಾಮಿ, ಕುಮಾರ್, ಮಹಿಳಾ ರೈತ ಘಟಕದ ಸುಶೀಲಮ್ಮ, ಜಯಭೋವಿ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬೂದನೂರು ರಾಮಯ್ಯ, ಗ್ರಾಮಸ್ಥರಾದ ರೇಣುಕಮ್ಮ, ಚಿಕ್ಕಬೈರಪ್ಪ, ಮಲ್ಲಯ್ಯ, ಪಾರ್ಥಸಾರಥಿ, ಚಿಕ್ಕಣ್ಣ ಮತ್ತಿತರರು ಪಾಲ್ಗೊಂಡಿದ್ದರು.