ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಾ.ರಾಜ್ ವ್ಯಕ್ತಿಯಲ್ಲ, ಶಕ್ತಿ

Rashmi Kasaragodu
Updated On : 3 Dec 2013, 12:31 pm

ರಾಮನಗರ: ಡಾ.ರಾಜ್‌ಕುಮಾರ್ ಅವರು ಒಬ್ಬ ವ್ಯಕ್ತಿಯಲ್ಲ, ಅವರೊಂದು ಶಕ್ತಿಯಾಗಿದ್ದರು. ಅವರು ನಟನೆಯ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕಾರ್ಯವನ್ನು ಮಾಡಿದ ಮಹಾಪುರುಷ ಎಂದು ಮಾಜಿ ಶಾಸಕ ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ಎಂ.ಎಚ್. ಶಿಕ್ಷಣ ಸಂಸ್ಥೆ ಆವರಣದಲ್ಲಿ ಸ್ನೇಹಕೂಟ ಸಂಸ್ಥೆ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್ ಗೀತ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ರಾಜ್ ಅವರು ಕೇವಲ ನಟನೆಗೆ ಮಾತ್ರ ಸೀಮಿತರಾಗಿರದೆ ನಾಡು, ನುಡಿಗೆ ಧಕ್ಕೆಯಾದ ಸಂದರ್ಭದಲ್ಲಿ ಅಭಿಮಾನಿ ಬಳಗದೊಂದಿಗೆ ಹೋರಾಟ ನಡೆಸಿದರು ಎಂದರು.
ಡಾ.ರಾಜ್ ಅವರ ಸಿನಿಮಾಗಳಲ್ಲಿ ಅಣ್ಣ-ತಂಗಿ, ತಂದೆ-ತಾಯಿ, ಗಂಡ-ಹೆಂಡತಿ ಇವರುಗಳ ನಡುವಿನ ಸಂಬಂಧ ಹೇಗಿರಬೇಕೆಂದು ಅದ್ಭುತವಾಗಿ ಚಿತ್ರಿಸಲಾಗಿದೆ. ಮನರಂಜನೆಯ ಜತೆಗೆ ಉತ್ತಮ ಸಂದೇಶಗಳು ಇವರು ನಟಿಸಿದ ಸಿನಿಮಾಗಳಲ್ಲಿ ಇರುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ಕೇವಲ ಹಣ ಗಳಿಕೆಗಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಶ್ಲೀಲ ದೃಶ್ಯಗಳಿಂದ ತುಂಬಿರುವ ಇವು ಮನೆ ಮಂದಿ ಕುಳಿತು ನೋಡಲು ಮುಜುಗರ ಪಡುವಂತಾಗಿದೆ ಎಂದು ವಿಷಾದಿಸಿದರು.
ಮಾದರಿ ಪುರುಷ: ಡಾ. ರಾಜ್ ಅವರ ನಟನೆ, ಗಾಯನ, ಸಂಭಾಷಣೆ ಎಂತಹವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಅವರು ಕನ್ನಡ ನಾಡಿನ ಮಾದರಿ ಪುರುಷರಾಗಿದ್ದಾರೆ. ಅಪಾರವಾದ ಅಭಿಮಾನಿ ಬಳಗ ಹೊಂದಿದ್ದ ಅವರು ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಮಂದಿ ಅಭಿಮಾನಿಗಳು ಅವರನ್ನು ಅನುಕರಿಸಿ, ತಮ್ಮ ತಪ್ಪುಗಳನ್ನು ತಿದ್ದುಕೊಂಡಿದ್ದಾರೆ ಎಂದು ತಿಳಿಸಿದರು.
ಡಾ.ರಾಜ್ ಕುಮಾರ್ ಅವರು ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಕೇವಲ 3ನೇ ತರಗತಿ ಓದಿದ ಒಬ್ಬ ವ್ಯಕ್ತಿಯೂ ಕೂಡ ಉನ್ನತವಾದುದನ್ನು ಸಾಧಿಸಬಹುದು. ಸಾಧನೆಗೆ ವಿದ್ಯೆ ಮುಖ್ಯವಲ್ಲ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ತಿಳಿಸಿದರು.
ಸರಳ ಸಜ್ಜನಿಕೆ:  ಸರಳ, ಸಜ್ಜನಿಕೆಗೆ ಮತ್ತೊಂದು ಹೆಸರೇ ಡಾ.ರಾಜ್ ಕುಮಾರ್. ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಎಲ್ಲಾ ಭಾಷೆ, ಭಾಷಿಗರಿಗೂ ಅಷ್ಟೇ ಗೌರವದಿಂದ ಕಾಣುತ್ತಿದ್ದರು. ಎಲ್ಲಾ ಭಾಷಿಗರೂ ಸಾಮರಸ್ಯದಿಂದ ಜೀವನ ನಡೆಸುವುದು ಅವರ ಆಶಯವಾಗಿತ್ತು ಎಂದು ಹೇಳಿದರು.
ಡಾ.ರಾಜ್ ಅವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು. ಇದಕ್ಕಾಗಿ ಕೋಟ್ಯಂತರ ರು.ಗಳನ್ನು ದಾನ ಮಾಡಿದ್ದಾರೆ. ಆದರೆ, ಎಂದೂ ಇದನ್ನು ಹೇಳಿಕೊಂಡವರಲ್ಲ. ಪ್ರಚಾರದ ಘೀಳು ಅಂಟಿಸಿಕೊಂಡವರಲ್ಲ ಎಂದು ರಾಮೇಗೌಡ ತಿಳಿಸಿದರು.  
ಜೂನಿಯರ್ ರಾಜ್‌ಕುಮಾರ್ ಎಂದೇ ಪ್ರಸಿದ್ಧರಾಗಿರುವ ಯರೇಹಳ್ಳಿಯ ಮುನಿರಾಜು, ಹಾಡುಗಾರ ಗಂಗೋತ್ರಿ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಂತರ ಡಾ.ರಾಜ್‌ಕುಮಾರ್ ಅವರ ಗೀತಗಾಯನ ಕಾರ್ಯಕ್ರಮ ನಡೆಯಿತು.  ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ನಗರಸಭಾ ಸದಸ್ಯ ಲೋಹಿತ್‌ಬಾಬು, ಮಾಜಿ ಉಪಾಧ್ಯಕ್ಷ ಬಿ.ಉಮೇಶ್, ಸ್ನೇಹಕೂಟ ಅಧ್ಯಕ್ಷ ಎಚ್.ಪಿ. ನಂಜೇಗೌಡ, ಎಂ.ಎಚ್.ಚಂದ್ರಶೇಖರ್, ರಾ.ಶಿ.ಬಸವರಾಜು, ಹನುಮೇಗೌಡ, ಪಿ.ಎಸ್.ರಾಜು, ಸಿ.ಎ.ಶಾಂತಕುಮಾರ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement