ನರೇಗಾ ಯೋಜನೆ ಕಾಮಗಾರಿ ಕಳಪೆ ಆರೋಪ
ಕನಕಪುರ: ಕನಕಪುರ ತಾಲೂಕಿನ ಮುಳ್ಳಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ಕಾಮಗಾರಿ ಕಳಪೆದರ್ಜೆಯಿಂದ ಕೂಡಿದ್ದು ರಾಜ್ಯ ಹಾಗೂ ಕೇಂದ್ರಸರ್ಕಾರದ ಹಣದ ದುರುಪಯೋಗ ನಡೆಯುತ್ತಿದೆ ಎಂದು ಗ್ರಾಪಂ ಸದಸ್ಯ ಎಂ.ಸಿ.ಶಿವಶಂಕರ್ ಆರೋಪಿಸಿದ್ದಾರೆ.
ಮುಳ್ಳಹಳ್ಳಿಯ ಗಂಗಾಮತಸ್ಥರ ಬೀದಿಯಲ್ಲಿ 1.24ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆತೂರಿ ಮನಬಂದಂತೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ, ಈ ಬಗ್ಗೆ ಗ್ರಾಪಂ ಪಿಡಿಓ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ, ಸದಸ್ಯರ ದೂರನ್ನು ನಿರ್ಲಕ್ಷಿಸಿ ಶಿಷ್ಟಾಚಾರ ಲೋಪ ಎಸಗಿದ್ದಾರೆ. ಕೆಲವು ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಹಣವನ್ನು ನುಂಗಲು ಹುನ್ನಾರ ನಡೆಸಿದ್ದು ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಶಿವಶಂಕರ್ ಆಗ್ರಹಿಸಿದ್ದಾರೆ.