ಪೋಷಕರು ಮಕ್ಕಳ ಬಗ್ಗೆ ಮುತುವರ್ಜಿ ವಹಿಸಲಿ
ಚನ್ನಪಟ್ಟಣ: ವಿದ್ಯಾಭ್ಯಾಸ ವಿಚಾರದಲ್ಲಿ ಶಿಕ್ಷಕರಿಗಿಂತ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವುದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ ಕಿವಿಮಾತು ಹೇಳಿದರು.
ಪಟ್ಟಣದ ಅಪ್ಪಗೆರೆಯ ಸೇಂಟ್ ಆನ್ಸ್ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ನಡೆದ ಸೇಂಟ್ ಆನ್ಸ್ ವಿದ್ಯಾಸಂಸ್ಥೆಯ ಪೋಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಆಧುನಿಕಯುಗದಲ್ಲಿ ಸ್ಪರ್ಧೆ ತೀವ್ರಗೊಳ್ಳುತ್ತಿರುವುದರಿಂದ ಶಿಕ್ಷಕರ ಜೊತೆ ಜೊತೆಗೆ ಪೋಷಕರು ತಮ್ಮ ಮಕ್ಕಳಲ್ಲಿ ವಿದ್ಯೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯುವಂತಹ ವಾತಾವರಣ ಸೃಷ್ಟಿಸಬೇಕು. ಮಕ್ಕಳಲ್ಲಿ ಸ್ಪರ್ಧಾಮನೋಭಾವವನ್ನು ಬಿತ್ತಬೇಕು. ಅಂದಂದಿನ ಪಾಠಪ್ರವಚನಗಳನ್ನು ಅಂದಂದೆ ಮನನ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ಮಕ್ಕಳಲ್ಲಿ ವಿದ್ಯೆಯ ಬಗ್ಗೆ ಆಸಕ್ತಿ ಬೆಳೆದು ಉತ್ತಮ ಅಂಕ ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಅರ್.ಬಾಲರಾಜ್ ಮಾತನಾಡಿ, ಇಂದು ಶಿಕ್ಷಣದಲ್ಲಿ ತಾರತಮ್ಯ ಉಂಟಾಗುತ್ತಿದೆ. ದೇಶದಲ್ಲಿ ಏಕರೂಪದ ಶಿಕ್ಷಣವಿಲ್ಲದೆ ವಿದ್ಯಾರ್ಥಿಗಳು ಸಮನಾದ ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಇಂದು ವಿದ್ಯೆ ಹೊರೆಯಂತಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಕಿರಣ್ ಕಿಣಿ, ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ರಿಬ್ರಿಜಿಟ್ ಜಾನ್, ಗ್ರಾ.ಪಂ. ಸದಸ್ಯೆ ಕುಮಾರಿ, ಮುಖ್ಯಶಿಕ್ಷಕಿ ಸಿಸ್ಟರ್ ಮೇರಿ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.