ಕಬ್ಬಡಿಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕಿದೆ: ಮರಿದೇವರು
ಚನ್ನಪಟ್ಟಣ: ಭಾರತೀಯ ಕ್ರೀಡೆಗಳಲ್ಲಿ ಕಬ್ಬಡಿಗೆ ತನ್ನದೇ ಆದ ಪ್ರಧಾನ ಸ್ಥಾನವಿದ್ದು ಮಾನವನ ದೈಹಿಕ ಮತ್ತು ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಿರುವ ಕಬ್ಬಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಮರಿದೇವರು ಅಭಿಪ್ರಾಯಪಟ್ಟರು.
ಪಟ್ಟಣದ 10ನೇ ಅಡ್ಡರಸ್ತೆಯಲ್ಲಿರುವ ಅರುಣಾ ಕ್ರೀಡಾಸಂಸ್ಥೆಯ ಆವರಣದಲ್ಲಿ ನವಚೇತನಾ ಸಂಸ್ಥೆ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶಿ ಕ್ರೀಡೆಗಳಿಗೆ ಸೂಕ್ತ ಪ್ರೋತ್ಸಾಹ ದೊರೆಯದೆ ನಶಿಸುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂ.ಎಲ್. ಶಂಕರಪ್ಪ ಮಾತನಾಡಿ, ಗ್ರಾಮೀಣ ಕ್ರೀಡೆಗಳ ಜೊತೆಗೆ ಜಾನಪದ ಕಲೆಗಳನ್ನು ಪ್ರೋತ್ಸಾಹಿಸಲು ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಸಂತೋಷದ ವಿಷಯವಾಗಿದ್ದು, ಇದೇ ತರಹದ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು. ಅಂತರ ರಾಷ್ಟ್ರೀಯ ಕಬ್ಬಡಿ ಪಟು ಬಿ.ಸಿ.ರಮೇಶ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ. ವೀರೇಗೌಡರು, ನಗರ ಸಭಾ ಮಾಜಿ ಉಪಾಧ್ಯಕ್ಷ ಕೆ.ಎಲ್.ಕುಮಾರ್, ನಗರ ಸಭಾ ಸದಸ್ಯರಾದ ಪುರುಷೋತ್ತಮ, ವಿಷಕಂಠಮೂರ್ತಿ, ಕಲ್ಪವೃಕ್ಷ ಪತ್ತಿನ ಸಹಕಾರ ಸಂಘ ಸಹಕಾರ ಸಂಘದ ನಿರ್ದೇಶಕ ಎಸ್.ಸಿ. ಶೇಖರ್ ಉಪಸ್ಥಿತರಿದ್ದರು.
ಅಪ್ಪಗೆರೆ ಸತೀಶ್, ಬ್ಯಾಡರಹಳ್ಳಿ ಶಿವಕುಮಾರ್, ನೀಲಸಂದ್ರ ಸಿದ್ದರಾಮು, ಎಚ್.ಎಸ್. ಸರ್ವೋತ್ತಮ್ ತಂಡ ಗೀತಗಾಯನ ಕಾರ್ಯಕ್ರವನ್ನು ನಡೆಸಿಕೊಟ್ಟಿತು. ದಂಬ ಸೈನ್ಯದ ಜಿಲ್ಲಾಧ್ಯಕ್ಷರಾದ ಎಸ್.ಶಿವಕುಮಾರ್ ಸ್ವಾಗತಿಸಿ, ದೇವೇಂದ್ರಕುಮಾರ್ ವಂದಿಸಿದರು.