ಕಸ ಸಂಗ್ರಹ ಡಬ್ಬಿಗಳ ವಿತರಣೆ
ದೊಡ್ಡಬಳ್ಳಾಪುರ: ಇಲ್ಲಿನ ನಗರಸಭೆ 6ನೇ ವಾರ್ಡಿನಲ್ಲಿ ಮನೆಮನೆಗಳಿಗೆ ಕಸ ಸಂಗ್ರಹಣೆ ಡಬ್ಬಿಗಳನ್ನು ವಿತರಿಸುವ ಕಾರ್ಯಕ್ರಮ ಮುತ್ತೂರು ಬಡಾವಣೆಯಲ್ಲಿ ನಡೆಯಿತು. ನಗರಸಭೆ ಸದಸ್ಯ ಎಂ.ಮಲ್ಲೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ನಗರದ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವ ಹಿತಾಸಕ್ತಿಯಲ್ಲಿ ನಗರಸಭೆಯೊಂದಿಗೆ ಜನ ಕೈಗೂಡಿಸಬೇಕು. ಮನೆಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಸಹಾಯವಾಗುವಂತೆ ಕೊಳೆಯುವ ಕಸ,ಕೊಳೆಯದ ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೇರ್ಪಡಿಸಿ ನೀಡುವಂತಾಗಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸ ಸಂಗ್ರಹಿಸಲು ಬರುವ ನಗರಸಭೆ ಸಿಬ್ಬಂದಿಗೆ ನೀಡಬೇಕು. ಸಾರ್ವಜನಿಕರ ಸಹಾಯವಿದ್ದರೆ ಮಾತ್ರ ನಗರದ ನೈರ್ಮಲ್ಯ ಸುಧಾರಣೆ ಸಾಧ್ಯ ಎಂದರು.