ಗುತ್ತಿಗೆ ಬಿಲ್ ಮಂಜೂರಾತಿ ಪ್ರಕರಣ ತನಿಖೆಗೆ ಸಮಿತಿ
ಕ.ಪ್ರ.ವಾರ್ತೆ ರಾಮನಗರ ಡಿ.3
ಕಳಪೆ ಕಾಮಗಾರಿಯಿಂದ ಕೂಡಿದ್ದ ಹಾಸ್ಟೆಲ್ ಕಟ್ಟಡವನ್ನು ಹಸ್ತಾಂತರಿಸಿಕೊಂಡು, ಗುತ್ತಿಗೆ ಬಿಲ್ ಮಂಜೂರಾತಿ ಮಾಡಿರುವ ಪ್ರಕರಣದ ಸಂಬಂಧ ತನಿಖೆಗೆ ಸಮಿತಿ ರಚಿಸುವಂತೆ ಮಂಗಳವಾರ ನಡೆದ ಜಿ.ಪಂ. ಸಾಮಾನ್ಯ ಸಭೆ ನಿರ್ಧರಿಸಿತು.
ತಿಪ್ಪಸಂದ್ರ ಕ್ಷೇತ್ರದ ಸದಸ್ಯ ಎಂ.ಕೆ.ಧನಂಜಯ ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸುದೀರ್ಘ ಚರ್ಚೆ ನಡೆದು, ಈ ಪ್ರಕರಣ ಸಂಬಂಧ ಉನ್ನತಾಧಿಕಾರಿಗಳ ತಂಡದಿಂದ ತನಿಖೆ ನಡೆಸಲು ಅಧ್ಯಕ್ಷ ಎಚ್.ಸಿ.ರಾಜು ಆದೇಶಿಸಿದರು.
ಉಪ ಕಾರ್ಯದರ್ಶಿ ನೇತೃತ್ವದ ತನಿಖಾ ಸಮಿತಿಯಲ್ಲಿ ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ, ಡಿಡಿಪಿಐ ಹಾಗೂ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಯಿತು.
ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ರು.69.85 ಲಕ್ಷ ವೆಚ್ಚದಲ್ಲಿ ಕೆಜಿಬಿಬಿ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರಾಜೀವ್ ಗಾಂಧಿ ಗೃಹ ಮಂಡಳಿಗೆ ವಹಿಸಲಾಗಿತ್ತು. ಆದರೆ ಕಟ್ಟಡ ಕಾಮಗಾರಿ ಕಳಪೆಯದ್ದಾಗಿದೆ, ಕಟ್ಟಡಕ್ಕೆ ಚುರುಕಿ ಹಾಕಿಲ್ಲ, ಕೊಳವೆ ಬಾವಿ ಕೊರೆದಿಲ್ಲ ಹಾಗಾಗಿ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಂದು ವರ್ಷ ಕಳೆಯುವ ಮುನ್ನವೇ ಸೋರುತ್ತಿದೆ ಧನಂಜಯ ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ. ಸಿಇಒ, ಡಿಡಿಪಿಐ, ಬಿಇಒ ಅವರು ಕಟ್ಟಡ ಪರಿಶೀಲನೆ ನಡೆಸಿ, ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದಾಗ್ಯೂ ಕಟ್ಟಡವು ಸುಸ್ಥಿತಿಯಲ್ಲಿದೆ ಎಂದು ಶಿಕ್ಷಣ ಇಲಾಖೆ ವಶಕ್ಕೆ ಪಡೆದು, ಬಿಲ್ ಪಾವತಿಸಲಾಗಿದೆ. ಕರ್ತವ್ಯಲೋಪ ಎಸಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಧನಂಜಯ ಆಗ್ರಹಿಸಿದಾಗ ಅಧ್ಯಕ್ಷರು ತನಿಖೆಗಾಗಿ ಸಮಿತಿ ರಚಿಸಿದರು.
ಸದಸ್ಯ ಎಂ.ಕೆ. ಧನಂಜಯ ಅವರ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಡಿ.9ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಅಧ್ಯಕ್ಷರು ಸೂಚನೆ ನೀಡಿದರು.