ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲಂಚ ಪಡೆಯುವಾಗ ಬಲೆಗೆ ಬಿದ್ದ ಭೂ ಮಾಪಕ

Rashmi Kasaragodu
Updated On : 4 Dec 2013, 1:00 am

ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ   ಡಿ.3
ದೊಡ್ಡಬಳ್ಳಾಪುರ ತಾಲೂಕು ಕಚೇರಿಯಲ್ಲಿ ರೈತರೊಬ್ಬರಿಂದ ಲಂಚ ಸ್ವೀಕರಿಸುವ ವೇಳೆ ಪರವಾನಗಿ ಪಡೆದ ಭೂಮಾಪಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕಳೆದ 4 ದಿನಗಳ ಹಿಂದೆಯಷ್ಟೇ ಪಿಡಿಓ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಸಿಯಾಗಿರುವಾಗಲೇ ಈಗ ಮತ್ತೊಬ್ಬರು ಲೋಕಾಯುಕ್ತರಿಗೆ ಸಿಕ್ಕಿಬಿದ್ದಿರುವುದು ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿರುವುದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಎಸೈ ಸುಬ್ರಹ್ಮಣ್ಯ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಭೂಮಾಪಕ ಡಿ.ಬಿ.ಗೌಡ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ ಲಕ್ಷ್ಮಣ ಎಂಬಾತ ತಾಲೂಕಿನ ಸಾಸಲು ಹೋಬಳಿ ಮಲ್ಲಸಂದ್ರ ಗ್ರಾಮದಲ್ಲಿ ಖರೀದಿಸಿದ್ದ 30 ಗುಂಟೆ ಜಮೀನು ಶುದ್ಧ ಕ್ರಯಕ್ಕೆ ಭೂಮಾಪಕರ ಅಧಿಕೃತ ನಕ್ಷೆ ಬೇಕಿತ್ತು. ಈ ವಿಚಾರವಾಗಿ ಕಳೆದ 3 ತಿಂಗಳಿಂದ ಆತನನ್ನು ಕಚೇರಿಗೆ ಪದೇ ಪದೇ ಬರಮಾಡಿಕೊಂಡು ಹಣದ ಬೇಡಿಕೆ ಇಟ್ಟಿದ್ದರು. 10 ಸಾವಿರ ನೀಡುವಂತೆ ಭೂ ಮಾಪಕ ಒತ್ತಾಯಿಸಿದ್ದು ಕೊನೆಗೆ 6 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಮೊದಲ ಕಂತಿನಲ್ಲಿ 3 ಸಾವಿರ ಹಣವನ್ನು ಈಗಾಗಲೇ ಪಡೆದಿದ್ದ ಆತ ಉಳಿದ 3 ಸಾವಿರ ಹಣವನ್ನು ಪಡೆಯುವಾಗ ಮಂಗಳವಾರ ಸಂಜೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.
ಸೋಮವಾರವಷ್ಟೇ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಉಪಲೋಕಾಯುಕ್ತ ಅದಾಲತ್ ನಡೆಸಿ, ವಿವಿಧ ಕಡತಗಳ ವಿಲೇವಾರಿ ಮಾಡಿದ್ದರು. ತಾಲೂಕಿನ ವಿವಿಧ ಇಲಾಖೆಗಳಲ್ಲಿ ಹೆಚ್ಚಿರುವ ಭ್ರಷ್ಟಾಚಾರದ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದರು. ನಂತರದ ದಿನವೇ ಈ ದಾಳಿ ನಡೆದಿರುವುದು ವಿಶೇಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement