ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಕಲಚೇತನರಿಗೆ ಸಾಮಾಜಿಕವಾಗಿ ಸಮಾನ ಅವಕಾಶ ಬೇಕು

Rashmi Kasaragodu
Updated On : 4 Dec 2013, 1:01 am

ಕ.ಪ್ರ.ವಾರ್ತೆ   ದೊಡ್ಡಬಳ್ಳಾಪುರ   ಡಿ.3
ವಿಕಲಚೇತನ ಜನರಿಗೆ ಸಾಮಾಜಿಕ ಸ್ಥಾನಮಾನಗಳನ್ನು ಇತರ ವ್ಯಕ್ತಿಗಳಿಗೆ ಸರಿಸಮಾನವಾಗಿ ದೊರಕಿಸಿಕೊಡುವಲ್ಲಿ ಸಮುದಾಯದ ಪಾತ್ರ ಮಹತ್ವದ್ದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಕಲಾ ಹೇಳಿದರು.
ಇಲ್ಲಿನ ಸರ್ಕಾರಿ ಬಾಲಕಿಯ ಮಾಧ್ಯಮಿಕ ಶಾಲೆ(ಜಿಜಿಎಂಎಸ್)ಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಾಟಾಗಿತ್ತು.
ಇಂದಿನ ಸಮಾಜದಲ್ಲಿ ವಿಕಲಚೇತನರು ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿರುವುದು ಅನುಕರಣೀಯ. ವಿಚಾರವಂತಿಕೆ, ಬುದ್ಧಿವಂತಿಕೆಯಲ್ಲಿ ಇತರರ ಸರಿಸಮಾನವಾಗಿ ಗುರುತಿಸಿಕೊಳ್ಳುತ್ತಿರುವ ವಿಕಲಚೇತನರು ಎಲ್ಲರಂತೆ ಸರಿಸಮಾನ ಅವಕಾಶಗಳನ್ನು ಪಡೆಯಬೇಕು.
ಅವಕಾಶಗಳನ್ನು ಒದಗಿಸುವ ಕೆಲಸ ವ್ಯವಸ್ಥೆ ಮಾಡಬೇಕು ಎಂದ ಅವರು, ಸರ್ಕಾರ ಹಲವು ಯೋಜನೆಗಳ ಮೂಲಕ ವಿಕಲ ಚೇತನರ ಬಾಳಿಗೆ ಆಶಾಕಿರಣವಾಗಿದೆ. ಆ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಬೇಕು. ಯೋಜನೆಗಳು ಉದ್ದೇಶಿತ ಜನರನ್ನು ತಲುಪದ ಹೊರತು ಬದಲಾವಣೆ ಸಾಧ್ಯವಿಲ್ಲ ಎಂದರು.
ಯಾವಾಗಲೂ ಯೋಜನೆಗಳು ಮಾತಿನಲ್ಲಿ ಉಳಿದರೆ ಸಾಲದು, ಪ್ರತಿಯೊಬ್ಬ ಸುಶಿಕ್ಷಿತ ವ್ಯಕ್ತಿಯೂ ಯೋಜನೆಗಳ ಉದ್ದೇಶ ಅರಿತು ಅದು ತಲುಪಬೇಕಾದ ವ್ಯಕ್ತಿಗೆ ತಲುಪಿಸಲು ಕೆಲಸ ಮಾಡಬೇಕಿದೆ. ಆಗ ಮಾತ್ರ ವಿಕಲಚೇತನರ ಬಾಳು ಬೆಳಗಲು ಸಾಧ್ಯವಾಗುತ್ತದೆ. ಇತರ ವಿದ್ಯಾರ್ಥಿಗಳ ಜೊತೆಗೆ ವಿಕಲ ಚೇತನರಿಗೂ ಸಮಾನ ಅವಕಾಶಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸುಧೀಂದ್ರನಾಥ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಭೀಮರಾಜ್, ತಿಮ್ಮೇಗೌಡ, ಮಂಜುನಾಥ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ, ದೈಹಿಕ ಶಿಕ್ಷಣ ಸಂಯೋಜಕ ಬಿ.ಜಿ.ಅಮರನಾಥ್, ಸಾಕ್ಷರ ಭಾರತದ ಸಂಯೋಜಕ ಕೆ.ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.
ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನ ಶಾಲಾ ಮಕ್ಕಳಿಗೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement