ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಪುರಸಭೆ ಸದಸ್ಯರ ಮನವಿ
ದೇವನಹಳ್ಳಿ: ದೇವನಹಳ್ಳಿ ಪುರಸಭೆಯಿಂದ ನಾಲ್ಕು ದಿಗಳಿಗೊಮ್ಮೆಯಾದರೂ ಕುಡಿಯುವ ನೀರು ಸರಬರಾಜು ಮಾಡಲು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಇಲ್ಲಿನ ಬೆಸ್ಕಾಂ ಕಚೇರಿ ಎಇಇ ಡಾಕ್ಯಾನಾಯಕ್ ಅವರಿಗೆ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಎಲ್ಲ 23 ಮಂದಿ ಪುರಸಭಾ ಸದಸ್ಯರು ಬೆಸ್ಕಾಂ ಕಚೇರಿಗೆ ಮಂಗಳವಾರ ಆಗಮಿಸಿ ಮನವಿ ಸಲ್ಲಿಸಿದರು. ವಿದ್ಯುತ್ ವಿತರಣಾ ಕೇಂದ್ರದಲ್ಲಿನ 100 ಎಂವಿಎ ಪರಿವರ್ತಕದಲ್ಲಿ ತಾಂತ್ರಿಕ ತೊಂದರೆಯುಂಟಾಗಿ ವಿದ್ಯುತ್ ವಿತರಣೆಯಲ್ಲಿ ತೊಂದರೆಯಾಗಿತ್ತು. ಇನ್ನು ಎರಡು ಮೂರು ದಿನಗಳಲ್ಲಿ ಎಂದಿನಂತೆ ವಿದ್ಯುತ್ ಸರಬರಾಜಾಗುತ್ತದೆ ಎಂದು ಡಾಕ್ಯಾನಾಯಕ್ ತಿಳಿಸಿದರು. ದೇವನಹಳ್ಳಿ ಪುರಸಭೆ ವ್ಯಾಪ್ತಿಯ ಎಲ್ಲ ಮನೆಗಳಿಗೆ ಕುಡಿಯುವ ನೀರನ್ನು 10-12 ದಿನಗಳಿಗೊಮ್ಮೆ 30 ನಿಮಿಷಗಳ ಕಾಲ ಸರಬರಾಜು ಮಾಡುತ್ತಿದ್ದು ಇದರ ಜೊತೆಯಲ್ಲಿ ಟ್ಯಾಂಕರ್ ಮೂಲಕವೂ ಕಳೆದ ಏರಡು ವರ್ಷಗಳಿಂದ ಸರಬರಾಜು ಮಾಡುತ್ತಿದ್ದರೂ ಪ್ರತಿ ತಿಂಗಳು ನೀರು ಪೂರೈಕೆಗಾಗಿ ಟ್ಯಾಂಕರ್ಗಳಿಗೆ ಸುಮಾರು ಐದು ಲಕ್ಷ ರು. ಪುರಸಭೆಯಿಂದ ವೆಚ್ಚಮಾಡಲಾಗುತ್ತಿತ್ತು. ಆದರೆ ಜಿಲ್ಲಾಧಿಕಾರಿಯವರು ಇತ್ತೀಚೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ನಿಲ್ಲಿಸಿ ತೀರ ಅಗತ್ಯವಿರುವ ಪ್ರದೇಶಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಆದೇಶ ನೀಡಿರುವ ಹಿನ್ನಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿಗಳು ಹಾಗೂ ಸದಸ್ಯರು ಸಭೆ ನಡೆಸಿ ಸಮರ್ಪಕವಾಗಿ ವಿದ್ಯುತ್ ಇದ್ದರೆ ಎಲ್ಲ ಮನೆಗಳಿಗೆ ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬಹುದು ಎಂದು ತಿಳಿಸಿದ್ದಾರೆ.