ಆಶ್ರಯ ಯೋಜನೆ: ಬಿಲ್ ದುರುಪಯೋಗ ಆರೋಪ
ಚನ್ನಪಟ್ಟಣ: ಆಶ್ರಯ ಯೋಜನೆಯಡಿ ಮಂಜೂರಾಗಿದ್ದ ಮನೆಗಳ ಬಿಲ್ ಅನ್ನು ಪಂಚಾಯಿತಿ ಕರವಸೂಲಿಗಾರ ಮತ್ತು ಕಂಪ್ಯೂಟರ್ ಆಪರೇಟರ್‌ಗಳು ಫಲಾನುಭವಿಗೆ ನೀಡದೆ ದುರ್ಬಳಕೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಜೆ.ಬ್ಯಾಡರಹಳ್ಳಿ ಗ್ರಾ.ಪಂ ನಲ್ಲಿ ನಡೆದಿದೆ.
ಈ ಸಂಬಂಧ ಗ್ರಾಮದ ವಾಸಿಯಾದ ಶಿವಲಿಂಗಮ್ಮ ಎಂಬುವರು ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಂಪ್ಯೂಟರ್ ಆಪರೇಟರ್ ಮಧುಸೂದನ್ ಮತ್ತು ಕರವಸೂಲಿಗಾರ ನವೀನ್ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಮಂಜೂರಾಗಿದ್ದ ಹಣದಲ್ಲಿ 49 ಸಾವಿರ ರು. ದುರ್ಬಳಕೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ಫಲಾನುಭವಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಾವೇ ಸೃಷ್ಟಿಸಿ ಜಿಪಿಎಸ್ ಮೂಲಕ ಫಲಾನುಭವಿಯ ಖಾತೆಗೆ ಹಣ ಸಂದಾಯವಾಗುವಂತೆ ನೋಡಿಕೊಂಡಿರುವ ಇವರು ಬಳಿಕ ಬ್ಯಾಂಕ್ ಖಾತೆಯಿಂದ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆಂದು ದೂರುದಾರರು ಶಂಕಿಸಿದ್ದಾರೆ.
ಮತ್ತಷ್ಟು ಅವ್ಯವಹಾರ: ವಸತಿ ಯೋಜನೆಯ ಹಣ ಡ್ರಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಾಕಿ ತನತೋರಿರುವ ಈ ಮಂದಿ ಗ್ರಾ.ಪಂ ವ್ಯಾಪ್ತಿಯಲ್ಲಿ ಈ ಹಿಂದೆ ಮಂಜೂರಾಗಿರುವ ಮನೆಗಳ ಪೈಕಿ ಸಾಕಷ್ಟು ಮನೆಗಳ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಮಾಹಿತಿ ಹೊರ ಬೀಳುತ್ತಿದ್ದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಮನೆಗಳ ಮಾಹಿತಿ ಕಲೆಹಾಕುತ್ತಿದ್ದು ಎಲ್ಲಾ ಮಾಹಿತಿ ಲಭ್ಯವಾದ ಬಳಿಕ ಅಂತಿಮ ಚಿತ್ರಣ ದೊರಕಲಿದೆ.
ಉನ್ನತ ಮಟ್ಟದ ತನಿಖೆಗೆ ಆಗ್ರಹ: ಗ್ರಾ.ಪಂ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳಿಗೆ ಬಿಡುಗಡೆಯಾಗಿರುವ ಹಣವನ್ನು ಪಂಚಾಯಿತಿ ಸಿಬ್ಬಂದಿ ದುರ್ಬಳಕೆ ಮಾಡಿ ಕೊಂಡಿದ್ದು.
ಹಣ ದುರ್ಬಳಕೆಯಾಗದಂತೆ ಸರಕಾರ ಸಾಕಷ್ಟು ಎಚ್ಚರಿಕೆ ವಹಿಸಿ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗುವಂತೆ ನೋಡಿಕೊಳ್ಳಲಾಗುತ್ತಿತ್ತಾದರೂ ಹಣ ದುರ್ಬಳಕೆಯಾಗಿದೆ ಎಂದರೆ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಎಂದು ಗ್ರಾಮಸ್ಥರು ಸಂದೇಹ ವ್ಯಕ್ತಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.