ಪರಿಸರ ಸಂರಕ್ಷಣೆ ಎಲ್ಲರ ಹೊಣೆ: ಎಸ್. ಬಾಲಾಜಿ
ದೊಡ್ಡಬಳ್ಳಾಪುರ: ಇಲ್ಲಿನ ಮಾತೃಭೂಮಿ ಯುವಕ ಸಂಘದ ನೇತೃತ್ವದಲ್ಲಿ ಸರ್ಕಾರಿ ತೆಲುಗು ಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಎಸ್.ಬಾಲಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ ಆಗಬೇಕು. ಪರಿಸರ ಉಳಿದರೆ ನಾವು ಎಂಬ ಎಚ್ಚರಿಕೆ ಎಲ್ಲರಲ್ಲೂ ಬರಬೇಕು. ನಿರಂತರವಾಗಿ ನಡೆಯುತ್ತಿರುವ ಅರಣ್ಯನಾಶ, ವನ್ಯಜೀವಿ ನಾಶದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಎಲ್ಲರೂ ಪರಿಶ್ರಮ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಂಗಾಡಿಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್ ಮಾತನಾಡಿ ಸಂಘ-ಸಂಸ್ಥೆಗಳು ಪರಿಸರದ ಕುರಿತು ಕಾಳಜಿ ವಹಿಸುವುದು ಶ್ಲಾಘನೀಯ ಎಂದರು. ಸಂಘದ ಅಧ್ಯಕ್ಷ ಮಧುಸೂದನ್ ಮಾತನಾಡಿದರು.
ಶಾಲಾ ಮುಖ್ಯಶಿಕ್ಷಕ ಶ್ರೀರಾಮುಲು, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಎಸ್.ಮಂಜುನಾಥ್, ಪ್ರದೀಪ್, ಜಂಟಿ ಕಾರ್ಯದರ್ಶಿ ಎಸ್.ಕುಮಾರ್,ಹೇಮಲತಾ, ರಾಜೇಶ್ವರಿ, ಉಷಾ, ಪುಟ್ಟಗಂಗಮ್ಮ, ಕಲಾವತಿ, ಗುಣಸಾಗರ್, ವಿನೋದ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.