ಪೋಷಕರೇ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಿ
ಹೊಸಕೋಟೆ: ವಿದ್ಯಾರ್ಥಿಗಳು ಕೇವಲ ಪಠ್ಯಾಭ್ಯಾಸಕ್ಕೆ ಸೀಮಿತಗೊಳ್ಳದೆ ಸಾಹಿತ್ಯದ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ತಾವರಿ ಕೆರೆಯ ಲೋಟಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶಾಲಾ ಅಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ನಾಡಿನ ಕಲೆ, ಸಂಸ್ಕೃತಿ, ಭಾಷೆಯ
ಬೆಳವಣೆಗೆಗೆ ಶ್ರಮಿಸಿದ ಸಾಹಿತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪ್ರೇರಣೆ ನೀಡಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿವೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕೋಶಾಧ್ಯಕ್ಷ ಎನ್.ಮಹದೇವ್ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಆಕರ್ಷಿಸುವ ದಿಶೆಯಲ್ಲಿ ವಿಶಿಷ್ಟ ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತಿದ್ದು ಸಂಘ ಸಂಸ್ಥೆಗಳ ಸಹಕಾರ ಅತ್ಯವಶ್ಯವಾಗಿದೆ ಎಂದರು. ಡಾ.ಜಿ.ನಾರಾಯಣಸ್ವಾಮಿ ಅವರು ಕನ್ನಡ ಭಾಷೆಯ ಬೆಳವಣಿಗೆ ಬಗ್ಗೆ ಉಪನ್ಯಾಸ ನೀಡಿದರು. ಡಿ.ಕೆ.ನಾಗರಾಜ್, ಚಂದ್ರಶೇಖರ್,ತಿಮ್ಮರಾಯಪ್ಪ, ಬಿ.ಶಿವಣ್ಣ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಸನ್ಮಾನ: ಇದೇ ಸಂದರ್ಭ, ಸಮೀಪದ ಯಳಚಹಳ್ಳಿಯ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕನ್ನಡ ಶಿಕ್ಷಕಿ ಸುನಂದ ಬರಗುಂದಿಯವರನ್ನು ಸನ್ಮಾನಿಸಲಾಯಿತು. ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಾಲಾ ಸಿಬ್ಬಂದಿ ಮತ್ತಿತರರು ಹಾಜರಿದ್ದರು.
ಉಪನ್ಯಾಸ ಕಾರ್ಯಕ್ರಮ
ಚನ್ನಪಟ್ಟಣ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಡಿ. 5 ರಂದು ಮಧ್ಯಾಹ್ನ 2.30 ಗಂಟೆಗೆ ಚನ್ನಾಂಬಿಕಾ ಸಮೂಹ ಸಂಸ್ಥೆಗಳ ಬಿ.ಜೆ.ಎಲ್ ಪ್ರೌಢಶಾಲೆ ಆವರಣದಲ್ಲಿ ಶಿವಲಿಂಗೇಗೌಡ ಸಿಂಗರಾಜಿಪುರ ಸ್ಮರಣಾರ್ಥಮಹಾಕಾವ್ಯ ವಾಚನ ಹಾಗೂ ಕನ್ನಡ ನಾಡು ನುಡಿ ನೆಲ ಜಲದ ಬಗ್ಗೆ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಉದ್ಘಾಟನೆ ನೆರವೇರಿಸಲಿದ್ದಾರೆ.
ಕಾರ್ತೀಕ ಅಮಾವಾಸ್ಯೆ ಪ್ರಯುಕ್ತ ದೀಪೋತ್ಸವ
ಮಾಗಡಿ: ಪಟ್ಟಣದ ಕೊಟ್ಟಣ ಬೀದಿಯಲ್ಲಿರುವ ಪುರಾತನ ಆದಿಶಕ್ತಿ ಗ್ರಾಮ ದೇವತೆಗೆ ಕಾರ್ತೀಕ ಅಮಾವಾಸ್ಯೆ ಪ್ರಯುಕ್ತ 14ನೇ ವರ್ಷದ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ಇದೇ ಸಂದರ್ಭದಲ್ಲಿ ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಏರ್ಪಡಿಸಿದ್ದರು. ತಂದೆ ಹೊನ್ನಪ್ಪ, ತಾಯಿ ಗಂಗಮ್ಮ ಅವರ ಸ್ಮರಣಾರ್ಥ ಕುಮಾರಸ್ವಾಮಿ ಅವರು ದೇವಿಗೆ ಸಮಾರು 3.5 ಕೆ.ಜಿ ತೂಕದ ಬೆಳ್ಳಿ ಮುಖವಾಡ ಸಮರ್ಪಿಸಿದರು. ಗ್ರಾಮ ದೇವತೆ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಆರ್. ಮುದ್ದಹನುಮಯ್ಯ ಟ್ರಸ್ಟಿಗಳಾದ ಕುಮಾರಸ್ವಾಮಿ, ಹನುಮಯ್ಯ, ಸುಬ್ರಮಣಿ, ಸಿದ್ದಗಂಗಪ್ಪ, ಮರಿಯಪ್ಪ, ವೆಂಕಟರಂಗಯ್ಯ, ಆರ್.ಎನ್. ರಾಜಣ್ಣ, ಭರತ್ ಸಿಂಗ್,ಅಪ್ಪಿ, ಅಶ್ವತ್ಥ್, ರಮೇಶ್, ಪುಟ್ಟರಂಗಮ್ಮ, ಲಿಂಗಮ್ಮ ಇತರರು ಇದ್ದರು.