ಮಕ್ಕಳ ಹಕ್ಕು ರಕ್ಷಿಸುವಲ್ಲಿ ವಿಫಲ
ಮತ್ತೀಕೆರೆ ಜಯರಾಮ್
ರಾಮನಗರ: ಮಕ್ಕಳನ್ನಿಟ್ಟುಕೊಂಡು ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆಯರ ವಿರುದ್ಧ ಕ್ರಮ ಕೈಗೊಂಡು, ಮಕ್ಕಳಿಗೆ 20 ದಿನದೊಳಗೆ ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ನೀಡಿರುವ ಸೂಚನೆ ಪಾಲಿಸುವಲ್ಲಿ ರಾಮನಗರ ಪೊಲೀಸರು ವಿಫಲರಾಗಿದ್ದಾರೆ.
ಈ ಕುರಿತು ಅ.10ರಂದೇ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧ್ಯಕ್ಷರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ರವಾನಿಸಿದ್ದಾರೆ. ಇಷ್ಟಾಗಿಯೂ ರಾಮನಗರದ ಐಜೂರು ವೃತ್ತ, ರೇಲ್ವೆ ನಿಲ್ದಾಣ ಸಹಿತ ವಿವಿಧೆಡೆ ಕೈಯಲ್ಲೊಂದು, ಕಂಕುಳಲ್ಲೊಂದು ಮಗು ಹಿಡಿದ ಮಹಿಳೆಯರು ಭಿಕ್ಷೆ ಬೇಡುವುದು ಮಾತ್ರ ನಿಂತಿಲ್ಲ.
ಐಜೂರು ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಟ್ರಾಫಿಕ್ ಸಿಗ್ನಲ್ ಬಿದ್ದರೆ ಸಾಕು, ಅಲ್ಲಿ ನಿಂತ ಕಾರುಗಳ ಕಿಟಕಿ ಬಳಿ ಮಕ್ಕಳನ್ನು ಹಿಡಿದ ಭಿಕ್ಷುಕಿಯರು ಅಂಗಲಾಚುತ್ತಿರುತ್ತಾರೆ. ಆ ಮಕ್ಕಳನ್ನು ಕಂಡರೆ ಎಂತಹ ಕಲ್ಲು ಮನಸ್ಸಾದರೂ ಕರಗುತ್ತದೆ.
ಹಸುಗೂಸುಗಳು ಹಾಲು, ಆಹಾರವಿಲ್ಲದೆ ಹಸಿದಿವೆ. ಭಿಕ್ಷೆ ನೀಡಿ ಎಂದು ಗೋಗರೆಯುವ ಭಿಕ್ಷುಕಿಯರಿಗೆ ಪ್ರಯಾಣಿಕರು ಕೈಗೆ ಸಿಕ್ಕಷ್ಟು ಕೊಟ್ಟು ಸಾಗ ಹಾಕುತ್ತಾರೆ. ವಿದೇಶಿ ಪ್ರವಾಸಿಗರು ಸಹಿತ ಕೆಲವರು ಸಾಕಷ್ಟು ಹಣ ನೀಡುತ್ತಿರುತ್ತಾರೆ. ಹೀಗೆ ಮಕ್ಕಳನ್ನು ತೋರಿಸಿಯೇ ಭಿಕ್ಷುಕಿಯರು ಸಂಪಾದನೆ ದಂಧೆ ಮುಂದುವರೆಸಿದ್ದಾರೆ.
ಮಕ್ಕಳ ಬಗ್ಗೆ ಸಂಶಯ: ಭಿಕ್ಷಾಟನೆಗಾಗಿ ಬಳಸಿಕೊಳ್ಳುತ್ತಿರುವ ಮಕ್ಕಳೆಲ್ಲ ಆ ಭಿಕ್ಷುಕಿಯರೇ ಹಡೆದವೆನ್ನುವ ಬಗ್ಗೆ ಅನುಮಾನವಿದೆ. ಇಂತಹ ಭಿಕ್ಷುಕಿಯರ ಮೇಲೆ ಸ್ವಯಂ ಸೇವಾ ಸಂಸೆಯೊಂದು ನಡೆಸಿರುವ ಅಧ್ಯಯನದ ಪ್ರಕಾರ ಭಿಕ್ಷಾಟನೆಗೆ ಬಳಸುತ್ತಿರುವ ಎಲ್ಲ ಮಕ್ಕಳೂ ಅವರ ಸ್ವಂತದ್ದವಲ್ಲ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ.
ಅಂತೆಯೇ ಹೊತ್ತು ಮುಳುಗಿದ ಮೇಲೆ ಭಿಕ್ಷುಕಿಯರು ವೇಶ್ಯಾವಾಟಿಕೆಯಂತಹ ಕೃತ್ಯಗಳಲ್ಲಿ ತೊಡಗುತ್ತಾರೆ. ಅಂತಹ ವೇಳೆ ಮಕ್ಕಳಿಗೆ ಮತ್ತು ಬರುವ ಔಷಧ ನೀಡುತ್ತಾರೆ ಎನ್ನುವ ಎನ್.ಜಿ.ಒ. ವರದಿಯಲ್ಲಿರುವ ಅಂಶಗಳನ್ನು ಮಕ್ಕಳ ಹಕ್ಕುಗಳ ರಕ್ಷಣಾ ಘಟಕವು ಪೊಲೀಸರಿಗೆ ಈಗಾಗಲೇ ರವಾನಿಸಿದೆ.
ಎಗ್ಗಿಲ್ಲದೇ ಸಾಗಿದೆ: ಮಕ್ಕಳನ್ನ ಬಳಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುವುದು ಕಾನೂನು ರೀತ್ಯಾ ಅಪರಾಧವಾಗಿದ್ದರೂ ರಾಮನಗರದಲ್ಲಿ ಈ ದಂಧೆ ಎಗ್ಗಿಲ್ಲದೆ ಸಾಗಿದೆ. ಈ ಹಿಂದೆ ದೊಡ್ಡ ಮಾಫಿಯಾ ಇದ್ದು, ಹೊರ ರಾಜ್ಯಗಳಿಂದ ಮಹಿಳೆಯರು ಮತ್ತು ಮಕ್ಕಳನ್ನು ಕರೆತಂದು ಭಿಕ್ಷಾಟನೆಗೆ ಹಚ್ಚುತ್ತಿರುವ ಅನುಮಾನವೂ ದಟ್ಟವಾಗಿದೆ.
ರಾಮನಗರದ ಟ್ರಾಫಿಕ್ ಸಿಗ್ನಲ್ ಬಳಿ ಭಿಕ್ಷುಕಿಯರ ಗುಂಪು ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನು ರೀತ್ಯ ಅಪರಾಧ. ತಪ್ಪಿತಸ್ಥರಿಗೆ 3 ವರ್ಷ ಕಠಿಣ ಕಾರಾಗೃಹ ಸಜೆ ವಿಧಿಸಬಹುದಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡ ಮಕ್ಕಳ ರಕ್ಷಣೆಗೆ ಇಲಾಖೆ ಕ್ರಮ ಕೈಗೊಳ್ಳಲಿದೆ.
ಟಿ ಕೆ.ರಾಧ, ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ.
ಭಿಕ್ಷಾಟನೆಯನ್ನು ಸುಲಭವಾಗಿ ಹಣ ಗಳಿಸುವ ದಂಧೆಯಾಗಿಸಿಕೊಳ್ಳಲಾಗಿದೆ. ಅದಕ್ಕೆ ಬಳಸಿಕೊಳ್ಳುತ್ತಿರುವ ಮಕ್ಕಳು ಮತ್ತು ಭಿಕ್ಷುಕಿಯರ ಡಿ.ಎನ್.ಎ. ಪರೀಕ್ಷೆ ಅಗತ್ಯವಿದೆ. ಪೊಲೀಸ್ ಸಹಕಾರದೊಂದಿಗೆ ಕ್ರಮ ಕೈಗೊಂಡು, ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು.
ಟಿ ಪ್ರೊ.ಶಿವಲಿಂಗಯ್ಯ, ಸದಸ್ಯ, ಮಕ್ಕಳ ರಕ್ಷಣಾ ಸಮಿತಿ.