ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯುವ ಕಾಂಗ್ರೆಸ್‌ನಲ್ಲೀಗ ಚುನಾವಣೆ ತಲ್ಲಣ

Rashmi Kasaragodu
Updated On : 5 Dec 2013, 1:32 am

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಯುವ ಕಾಂಗ್ರೆಸ್ ಮತಗಟ್ಟೆ ಹಂತದ ಚುನಾವಣಾ ಕಣ ರಂಗೇರಿದೆ. ಡಿ.5 ಮತ್ತು 6ರ ಗುರುವಾರ ಮತ್ತು ಶುಕ್ರವಾರ ಚುನಾವಣೆಗಳು ನಡೆಯಲಿದ್ದು, ತಾಲೂಕಿನಲ್ಲಿ ಈ ಬಾರಿ 2850ಕ್ಕೂ ಹೆಚ್ಚು ಮತದಾರರಿದ್ದಾರೆ. ಒಟ್ಟು 228 ಮತಗಟ್ಟೆಗಳ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ನೂರಾರು ಆಕಾಂಕ್ಷಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿ, ಪ್ರಾತಿನಿಧ್ಯದ ಹುಮ್ಮಸ್ಸಿನಲ್ಲಿದ್ದಾರೆ.
ಕಾಂಗ್ರೆಸ್ ಸದ್ಯದಲ್ಲಿ ಆಡಳಿತ ಪಕ್ಷವಾಗಿದ್ದು, ತಾಲೂಕಿನಲ್ಲೂ ಕೂಡ ಅಧಿಕಾರದಲ್ಲಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಡೀ ಚುನಾವಣೆ ನಡೆಯುತ್ತಿದ್ದು, ಡಿ.5ರಿಂದ 8ರ ಒಳಗೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳ್ಳಲಿವೆ. 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 2462 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪೈಪೋಟಿ ಭರಾಟೆ: ಚುನಾವಣೆಯಲ್ಲಿ ಮತಗಟ್ಟೆ ಹಂತದ ಪ್ರತಿನಿಧಿಗಳಾಗಲು ಯುವಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದು, ಕಳೆದ ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟು ಬೇರೆ ಪಕ್ಷಗಳಿಗೆ ಹೋಗಿದ್ದ ಮಂದಿಯೂ ಕಾಂಗ್ರೆಸ್‌ನ ಬೂತ್ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅಧಿಕಾರದ ಬೆನ್ನತ್ತಿ ಹೋದವರಿಗೆ ಕಾಂಗ್ರೆಸ್ ಮತ್ತೆ ಚೈತನ್ಯ ಒದಗಿಸುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಎಂದು ಇಲ್ಲಿನ ಕೆಲ ಕಾಂಗ್ರೆಸ್ ಮುಖಂಡರು ಕೆಲ ಸ್ಪರ್ಧಿಗಳ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ ಮತ್ತಿತರ ಮುಖಂಡರು, ದೊಡ್ಡಬೆಳವಂಗಲ ಹೋಬಳಿಯ ಮುಖಂಡರಾಗಿದ್ದು, ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾಗಿ ಗ್ರಾಮಪಂಚಾಯಿತಿ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡಿದ್ದ ಡಿ.ಸಿ.ಶಶಿಧರ್ ಈಗ ಕಾಂಗ್ರೆಸ್‌ನ ಮತಗಟ್ಟೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅಧಿಕಾರವಿಲ್ಲದೆ ಹೋದಾಗ ಕಾಂಗ್ರೆಸ್ ತ್ಯಜಿಸಿ ಈಗ ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿರುವ ಅವರ ಧೋರಣೆ ಖಂಡನೀಯ. ಈಗ ಸದ್ಯ ಅವರು ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ದಿನಕ್ಕೊಂದು ಪಕ್ಷದ ಪರ ನಿಲ್ಲುವುದು ಎಷ್ಟು ಸರಿ ಈ ರೀತಿಯೇ ಮುಂದುವರೆದರೆ ನಿಷ್ಠ ಕಾಂಗ್ರೆಸ್ ಸದಸ್ಯರಿಗೆ ವಂಚನೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶಶಿಧರ್ ಹೇಳಿಕೆ: ಇದೇ ವಿಚಾರದಲ್ಲಿ ಕನ್ನಡಪ್ರಭಕ್ಕೆ ಹೇಳಿಕೆ ನೀಡಿರುವ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ನಾನು ಈಗಲೂ ಭಾರತೀಯ ಯುವ ಕಾಂಗ್ರೆಸ್‌ನ ಸದಸ್ಯ. ಸಹಜವಾಗಿಯೇ ನಾನು ನಾಮಪತ್ರ ಸಲ್ಲಿಸಿದ್ದೇನೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಯೂತ್ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜಿನಾಮೆಯನ್ನೇನೂ ನೀಡಿಲ್ಲ. ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಅವರನ್ನು ಬೆಂಬಲಿಸಿದ್ದೆನೇ ಹೊರತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೇನೂ ಪಡೆದಿಲ್ಲ. ಈಗಲೂ ನಾನು ಮಾನಸಿಕವಾಗಿ ಕಾಂಗ್ರೆಸ್ ಪಕ್ಷದ ಜೊತೆಗೇ ಇದ್ದೇನೆ. ತಾಲೂಕಿನಲ್ಲಿ ಯುವ ಕಾಂಗ್ರೆಸ್ ಸಂಘಟನೆಯಲ್ಲಿ ನನ್ನ ಪಾತ್ರವೂ ಗಣನೀಯ ಎಂದಿದ್ದಾರೆ.




ಮತದಾರರ ವಿವರ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರದ 228 ಬೂತ್‌ಗಳಲ್ಲಿ 2850 ಮತದಾರರು, ದೇವನಹಳ್ಳಿಯ 258 ಬೂತ್‌ಗಳಲ್ಲಿ 2800, ಯಲಹಂಕದ 290 ಬೂತ್‌ಗಳಲ್ಲಿ 4200, ನೆಲಮಂಗಲದ 240 ಬೂತ್‌ಗಳಲ್ಲಿ 2400, ಹೊಸಕೋಟೆಯ 264 ಬೂತ್‌ಗಳಲ್ಲಿ 300, ಗೌರಿಬಿದನೂರಿನ 230 ಬೂತ್‌ಗಳಲ್ಲಿ 1000, ಚಿಕ್ಕಬಳ್ಳಾಪುರದ 224 ಮತಗಟ್ಟೆಗಳಲ್ಲಿ 1500 ಮತ್ತು ಬಾಗೇಪಲ್ಲಿಯ 240 ಮತಗಟ್ಟೆಗಳಲ್ಲಿ 1200 ಮತದಾರರಿದ್ದಾರೆ. ಅತಿ ಹೆಚ್ಚು ಮತದಾರರಿರುವ ದೇವನಹಳ್ಳಿ ಮತ್ತು ಯಲಹಂಕ ಕ್ಷೇತ್ರಗಳಲ್ಲಿ ಡಿ.6ರಿಂದ 8ರವರೆಗೆ 3 ದಿನಗಳ ಕಾಲ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ದೊಡ್ಡಬಳ್ಳಾಪುರದಲ್ಲಿ ಡಿ.5 ಮತ್ತು 6, ನೆಲಮಂಗಲದಲ್ಲಿ ಡಿ.7 ಮತ್ತು 8, ಉಳಿದ ಎಲ್ಲ ಕ್ಷೇತ್ರಗಳಲ್ಲಿ ಒಂದೇ ದಿನ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement