ವಿಕಲಚೇತನರಿಗೆ ಅವಕಾಶ ನೀಡಿ: ನ್ಯಾ. ಶ್ಯಾಮ್ ಪ್ರಸಾದ್
ಆನೇಕಲ್ಲು: ಸಮಾಜದ ಇತರ ವ್ಯಕ್ತಿಗಳಂತೆ ಬಾಳಿ ಬದುಕುವ ಹಕ್ಕನ್ನು ವಿಶೇಷ ಅವಶ್ಯಕತೆ ಉಳ್ಳ ಮಕ್ಕಳೂ ಹೊಂದಿರುತ್ತಾರೆ. ಇವರ ಬಗ್ಗೆ ಅನುಕಂಪಕ್ಕಿಂತ ಅವಕಾಶಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಹಿರಿಯಪ್ರ್ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾ. ಶ್ಯಾಮ್‌ಪ್ರಸಾದ್ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ಚೈತನ್ಯ ವಿದ್ಯಾ ಕೇಂದ್ರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ ನಡೆದ ವಿಶ್ವ ವಿಕಲ ಚೇತನರ ದಿನಾಚರಣೆಯಲ್ಲಿ ಮಾತನಾಡಿದರು.
ಕಾನೂನು ವ್ಯಾಪ್ತಿಯಲ್ಲಿ ಆ ಮಕ್ಕಳಿಗೆ ವೈದ್ಯಕೀಯ ತಪಾಸಣೆ, ಅವಶ್ಯವಿದ್ದಲ್ಲಿ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ನಂತರದ ದಿನಗಳಲ್ಲಿ ಸ್ವಾವಲಂಬಿ ಬದುಕಿಗೆ ಬೇಕಾದ ಸಹಕಾರ ಸಹಾಯ ನೀಡಲು ಅವಕಾಶವಿರುವುದಾಗಿ ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ನ್ಯಾ. ಆರ್. ಚಂದ್ರಪ್ಪ ಹೊನ್ನೂರು ಮಾತನಾಡಿ ಸಂಘ ಸಂಸ್ಥೆಗಳು ಇಂತಹ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಆರ್. ರಮೇಶ್ ಹಾಗೂ ವಕೀಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಅವರು ಅಂಗ ವಿಕಲ ಸಂಸ್ಥೆಯ ಮಾಸಿಕ ವೆಚ್ಚವನ್ನು ಭರಿಸುವುದಾಗಿ ವಾಗ್ದಾನ ಮಾಡಿದರು.