ವಿಕಲಚೇತನರಿಗೆ ಸೌಲಭ್ಯ ನೀಡುವುದು ಕರ್ತವ್ಯ
ಹೊಸಕೋಟೆ: ವಿಕಲಚೇತನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಬದಲಿಗೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಗಮನ ಹರಿಸಬೇಕಾದ್ದು ಅತ್ಯವಶ್ಯಕ ಎಂದು ಉಪನ್ಯಾಸಕ ಎಚ್.ಸಿ.ಪ್ರಕಾಶ್ ಹೇಳಿದರು.
ಪಟ್ಟಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ವಿಶೇಷ ನ್ಯೂನತೆಯುಳ್ಳ ಮಕ್ಕಳಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಕಲಚೇತನರು ಸ್ವಾವಲಂಬಿಗಳಾಗಲು ಪ್ರೋತ್ಸಾಹ ನೀಡುವುದರೊಂದಿಗೆ ಕೀಳರಿಮೆ ನಿವಾರಿಸಲು, ಆತ್ಮವಿಶ್ವಾಸ ಬೆಳೆಸಿಕೊಂಡು ಮುಖ್ಯವಾಹಿನಿಯಲ್ಲಿ ಇತರೆ ಮಕ್ಕಳೊಂದಿಗೆ ಸಮಾನ ಅವಕಾಶ ಪಡಿದುಕೊಂಡಲ್ಲಿ ಮಾತ್ರ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಈ ದಿಸೆಯಲ್ಲಿ ಮಕ್ಕಳ ವಿಕಸನಕ್ಕೆ ಆದ್ಯತೆ ನೀಡಬೇಕಾದ ಮಹತ್ತರವಾದ ಜವಾಬ್ದಾರಿಯನ್ನು ಪೋಷಕರು ನಿರ್ವಹಿಸಿದಲ್ಲಿ ಸಮನ್ವಯತೆ ಸಾಧಿಸಬಹುದಾಗಿದೆ. ವ್ಯಕ್ತಿತ್ವ ಬೆಳವಣೆಗೆಗೆ ಪೂರಕವಾದ ವಾತಾವರಣ ಸೃಷ್ಟಿಸಿ ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಗೋಪಾಲ್ ಮಾತನಾಡಿ ನಗರಗಳಲ್ಲಿ ರಸ್ತೆ, ಪ್ರಾರ್ಥನಾ ಸ್ಥಳ, ಬಸ್, ರೇಲ್ವೆ ನಿಲ್ದಾಣಗಳಲ್ಲಿ ವಿಕಲಚೇತನ ಮಕ್ಕಳನ್ನು ಬಿಟ್ಟು ಪೋಷಕರು ಪರಾರಿಯಾಗುವುದು ಸಾಮಾನ್ಯವಾಗುತ್ತಿದೆ. ರಕ್ತಸಂಬಂಧಿಗಳಲ್ಲಿ ವಿವಾಹ, ಆನುವಂಶೀಯತೆ, ವಂಶವಾಹಿನಿಯಲ್ಲಿ ವ್ಯತ್ಯಾಸ, ಗರ್ಭಾವಸ್ಥೆ ಸಂದರ್ಭದಲ್ಲಿ ಅಪೌಷ್ಟಿಕತೆ, ಬಡತನದಿಂದಾಗಿ ಸೂಕ್ತ ವೈದ್ಯಕೀಯ ಸಲಹೆ, ಚಿಕಿತ್ಸೆ ಪಡಿಯಲು ನಿರ್ಲಕ್ಷ್ಯ ವಿಕಲಚೇತನ ಮಕ್ಕಳ ಜನನಕ್ಕೆ ಪ್ರಮುಖ ಕಾರಣವಾಗಿದೆ. ಸಂಸ್ಥೆಯು ವಿಶೇಷ ಅಗತ್ಯವುಳ್ಳ ಮಕ್ಕಳ ಸವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಆತ್ಮಸ್ಥೈರ್ಯ ಹೊಂದಲು ಸಹಕಾರಿ: ಕ್ಷೇತ್ರ ಸಮನ್ವಯಾಧಿಕಾರಿ ಬಿ.ಪವಿತ್ರಾದೇವಿ ಮಾತನಾಡಿ, ತಾಲೂಕಿನಲ್ಲಿ 412 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲಾಗಿದೆ. ಸಮೀಪದ ಶಾಲೆಗಳಿಗೆ ದಾಖಲಿಸಿ ಸರಕಾರದ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಲಾಗುತ್ತಿದ್ದು ವೈದ್ಯಕೀಯ ತಪಾಸಣೆ, ಹೋಬಳಿ ಮಟ್ಟದಲ್ಲಿ ನೇತ್ರ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ ನ್ಯೂನತೆಗೆ ಅನುಗುಣವಾಗಿ ಉಚಿತವಾಗಿ ಸಲಕರಣೆ, ಕನ್ನಡಕಗಳನ್ನು ನೀಡಲಾಗುತ್ತಿದೆ.
ಇದರಿಂದ ಆತ್ಮ ಸ್ಥೈರ್ಯ ಹೊಂದಲು ಸಹಕಾರಿಯಾಗಲಿದೆ. ವಿಕಲಚೇತನರಿಗೆ ಉನ್ನತ ಶಿಕ್ಷಣ,ಉದ್ಯೋಗದಲ್ಲಿ ಸರಕಾರ ಮೀಸಲಾತಿ ಸೌಲಭ್ಯ ಸಹ ಕಲ್ಪಿಸಿದ್ದು ಸ್ವ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತಿದೆ. ತಾಲೂಕಿನಲ್ಲಿ ಸಮನ್ವಯ ಶಿಕ್ಷಣ ಯೋಜನೆಯಡಿ 14 ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದು ಪೋಷಕರಿಗೂ ಮಕ್ಕಳ ಪಾಲನೆ, ಪೋಷಣೆ ಬಗ್ಗೆ ತರಬೇತಿ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಚಿನ್ನಸ್ವಾಮಿಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಮೀಉಲ್ಲಾ ಮಾತನಾಡಿದರು.ಪುರಸಭೆ ಸದಸ್ಯ ಡಿ.ಕೆ. ನಾಗರಾಜ್, ಶಿಕ್ಷಣ ಸಂಯೋಜಕ ಮಲ್ಲೇಶಯ್ಯ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಅಲ್ಲಾ ಭಕ್ಷ್ ಮುನಿಶಾಮಯ್ಯ, ನಾರಾಯಣಸ್ವಾಮಿ, ಸಮನ್ವಯ ಶಿಕ್ಷಕಿ ಸುಮಂಗಲ, ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಕಾಂತ್, ವಿಶೇಷ ಅಗತ್ಯವುಳ್ಳ ಮಕ್ಕಳ, ಪೋಷಕರ ಒಕ್ಕೂಟದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸರಕಾರದ ಸೌಲಭ್ಯ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಬಹುವಾನ ನೀಡಲಾಯಿತು.