ಸಂಚಾರ ನಿಯಮ ಜಾರಿಯಲ್ಲಿ ವೈಫಲ್ಯ: ಸಂಚಾರ ದುಸ್ತರ
ಚನ್ನಪಟ್ಟಣ: ಪಟ್ಟಣದ ಬಸ್ ನಿಲ್ದಾಣದ ಸುತ್ತ ಸಂಚಾರದಟ್ಟಣೆ ತೀವ್ರಗೊಂಡಿದ್ದು, ಆಟೋ ಮತ್ತು ಖಾಸಗಿ ಬಸ್ಗಳು ಬೇಕಾಬಿಟ್ಟಿ ನಿಲುಗಡೆ ಮಾಡುವುದು, ಫುಟ್ಪಾತ್ ವ್ಯಾಪಾರ ಹಾಗೂ ಸಂಚಾರ ನಿಯಮ ಜಾರಿಗೆ ತರುವಲ್ಲಿ ಪೊಲೀಸರ ವೈಫಲ್ಯದಿಂದಾಗಿ ಬಸ್ ನಿಲ್ದಾಣದ ಬಳಿ ಸಂಚರಿಸುವುದೇ ದುಸ್ಥರ ಎನಿಸಿದೆ.
ಒಂದೆಡೆ ಖಾಸಗಿ ಬಸ್ ನಿಲ್ದಾಣದ ಸ್ಥಳದಲ್ಲಿ ಖಾಸಗಿ ಬಸ್ ಟರ್ಮಿನಲ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಖಾಸಗಿ ಬಸ್ಸುಗಳು ಮತ್ತು ಆಫೆ ಆಟೋಗಳ ನಿಲುಗಡೆಗೆ ಸ್ಥಳ ವಿಲ್ಲದೆ ಬಸ್ ನಿಲ್ದಾಣದ ಮುಂಭಾಗ, ಅಂಚೇ ಕಚೇರಿ ರಸ್ತೆಯನ್ನ ಆಶ್ರಯಿಸಿದ್ದು ಇದರಿಂದಾಗಿ ಸಾರ್ವಜನಿಕ ಸಂಚಾರಕ್ಕೆ ಸಾಕಷ್ಟು ಕಿರಿಕಿರಿ ಎದುರಾಗಿದೆ.
ಸರ್ಕಾರಿ ಬಸ್ ನಿಲ್ದಾಣದಿಂದ ಹೊರ ಬರುವ ಬಸ್ಸುಗಳಿಗೆ ರಸ್ತೆಬದಿಯಲ್ಲಿ ನಿಲುಗಡೆ ಮಾಡುವ ಕೆಲ ಖಾಸಗಿ ಬಸ್ಗಳು ಅಡ್ಡ ನಿಲ್ಲುವುದರಿಂದ ಮುಂದೆ ಹೋಗಲಾಗದೆ ಪರದಾಡುವಂತಾಗುತ್ತಿದ್ದು, ಅರ್ಧಗಂಟೆಗಳವರೆಗೆ ಮುಂದೆ ಹೋಗಲು ಸ್ಥಳವಿಲ್ಲದೆ ಸರ್ಕಾರಿ ಬಸ್ಗಳು ಹೆದ್ದಾರಿಯಲ್ಲಿ ಅಡ್ಡಲಾಗಿ ನಿಂತಿರುವ ಉದಾಹರಣೆ ಇದೆ.
ಕಡಿವಾಣ ಇಲ್ಲ: ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ ಬೇಕಾಬಿಟ್ಟಿ ವರ್ತಿಸುತ್ತಿದ್ದು ಎಲ್ಲೆಂದರಲ್ಲಿ ನಿಲ್ಲಿಸುವ, ಸಾರಿಗೆ ಸಂಸ್ಥೆ ವಾಹನ ಮತ್ತು ಖಾಸಗಿ ವಾಹನಗಳು ಸಂಚರಿಸಲಾಗದಂತೆ ಹದ್ದಾರಿಯಲ್ಲೇ ನಿಲ್ಲಿಸಿ ಕಿರಿಕಿರಿ ಉಂಟುಮಾಡುವ ಪ್ರಸಂಗಳಲ್ಲಿ ತೀವ್ರಗೊಂಡಿವೆಯಾದರೂ ಈ ಬಸ್ಗಳಿಗೆ ಕಡಿವಾಣ ಹಾಕುವಲ್ಲಿ ಪುರ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಾಗಿದ್ದಾರೆ.
ಅಂಚೇಕಚೇರಿ ರಸ್ತೆ ಆಟೋಮಯ: ಆಫೆ ಆಟೋಗಳಿಗೆ ಅಂಚೇಕಚೇರಿ ರಸ್ತೆ ಅನಧಿಕೃತ ನಿಲ್ದಾಣವಾಗಿ ಮಾರ್ಪಟ್ಟಿದ್ದು ಇಲ್ಲೇ ಆಟೋಗಳು ನಿಲುಗಡೆ ಮಾಡುವುದರಿಂದ ಈ ದಾರಿಯಲ್ಲಿ ದ್ವಿಚಕ್ರ ವಾಹನಗಳೇ ತಿರುಗಾಡಲಾಗದಂತಹ ಪರಿಸ್ಥಿತಿ ಎದುರಾಗಿದೆ. ಸದಾ ಜನಸಂದಣಿಯಿಂದ ಗಿಜಿಗುಡುವ ಅಂಚೇಕಚೇರಿ ರಸ್ತೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದಾಗಿದ್ದು ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ಪಡಿಪಾಟೀಲು ಹೇಳತೀರದಾಗಿದೆ.
ಪೊಲೀಸ್ ಇಲಾಖೆ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದಿದ್ದು, ಆಟೋಚಾಲಕರಿಗೆ ಒಂದುಸಾಲಿನಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಿದಲ್ಲಿ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದಾದರೂ ಪೊಲೀಸ್ ಇಲಾಖೆ ಮಾತ್ರ ಯಾಕೋ ಇತ್ತ ಗಮನ ಹರಿಸದಾಗಿದೆ.
ಫುಟ್ಪಾತ್ ಪಜೀತಿ: ಆರಂಭದ ದಿನಗಳಲ್ಲಿ ನಗರಸಭೆ ವೀರಾವೇಶದ ಮಾತುಗಳನ್ನಾಡಿ, ಕೊನೆಗೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಫುಟ್ಪಾತ್ ವ್ಯಾಪಾರ ಮಾಡಲು ಅನುವು ಮಾಡಿ ಕೊಟ್ಟಿತಾದರೂ ಇದಕ್ಕೆ ಕ್ಯಾರೇ ಎನ್ನದ ಫುಟ್ಪಾತ್ ವ್ಯಾಪಾರಿಗಳು ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರ ಮಾಡುವ ಜತೆಗೆ ರಸ್ತೆಯ ಕಡೆಗೂ ಅಲಲ್ಲಿ ವಿಸ್ತರಿಸಿದ್ದು ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ.
ಫುಟ್ಪಾತ್ ವ್ಯಾಪಾರಿಗಳ ಸಮಸ್ಯೆಗೆ ಶಾಶ್ವತಪರಿಹಾರ ಕಲ್ಪಿಸುವಲ್ಲಿ ನಗರಾಡಳಿತ ವಿಫಲ ಗೊಂಡಿದೆ. ವ್ಯಾಪಾರಕ್ಕೆ ಸೂಕ್ತ ಪರಿಹಾರ ಕಲ್ಪಸದ ನಗರಸಭೆ ಅಧಿಕಾರಿಗಳಿಂದಾಗಿ ಸಾರ್ವಜನಿಕ ರಸ್ತೆ ಸಂಚಾರಕ್ಕೆ ದುಸ್ಥರಗೊಂಡಿದೆ.
ನಿರ್ಮಾಣವಾಗದ ಸಿಗ್ನಲ್ ಲೈಟ್
ಪಟ್ಟಣದಲ್ಲಿ ಸಂಚಾರ ದಟ್ಟಣೆ ತೀವ್ರಗೊಂಡ ಪರಿಣಾಮ ಸಿಗ್ನಲ್ಲೈಟ್ ಅಳವಡಿಕೆ ಮಾಡಬೇಕೆಂದು ಸಾರ್ವಜನಿಕರು ಬಹುದಿನಗಳ ಕಾಲ ಹೋರಾಟ ನಡೆಸಿದ ಪರಿಣಾಮ ಸಾತನೂರು ಸರ್ಕಲ್ ಮತ್ತು ಶೇರುವಾ ಸರ್ಕಲ್ ಬಳಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆಯಾದರೂ ಅತಿಹೆಚ್ಚು ಸಂಚಾರ ದಟ್ಟಣೆ ಇರುವ ಬಸ್ ನಿಲ್ದಾಣದ ವೃತ್ತದಲ್ಲಿ ಮಾತ್ರ ಸಿಗ್ನಲ್ ಲೈಟ್ ನಿರ್ಮಾಣ ಕಾರ್ಯ ಮರೀಚಿಕೆಯಾಗೇ ಉಳಿದಿದೆ. ಬೆಂ-ಮೈ ಹೆದ್ದಾರಿ, ಹಾಗೂ ಪಟ್ಟಣದ ಅತಿಹೆಚ್ಚು ಜನ ಸಂದಣಿಯುಳ್ಳ ಚರ್ಚ್ ರಸ್ತೆ ಮತ್ತು ಅಂಚೇಕಚೇರಿ ರಸ್ತೆ ಕೂಡುವುದರಿಂದ, ಎರಡೂ ಬಸ್ ನಿಲ್ದಾಣಗಳು ಪಕ್ಕದಲ್ಲೇ ಇರುವುದರಿಂದ ಬಸ್ ನಿಲ್ದಾಣದ ವೃತ್ತ ಹೆಚ್ಚಿನ ಜನ ಸಂದಣಿಯಿಂದ ಕೂಡಿದ್ದು ಇಲ್ಲಿಗೆ ಸಿಗ್ನಲ್ ಲೈಟ್ ಅಳವಡಿಸುವ ಜರೂರತ್ತು ಸಾಕಷ್ಟಿದೆಯಾದರೂ ಸಂಬಂಧಿಸಿದ ಮಂದಿ ಮಾತ್ರ ಈ ಬಗ್ಗೆ ಗಮನಹರಿಸುತ್ತಿಲ್ಲ.