ಊರೆಲ್ಲ ಬರೀ ಉರಗ
ಕ.ಪ್ರ. ವಾರ್ತೆ ತುಮಕೂರು ಡಿ. 5
ಇಲ್ಲೊಂದು ಗ್ರಾಮದಲ್ಲಿ ಹಾವುಗಳ ಕಾರುಬಾರು ಹೆಚ್ಚಾಗುತ್ತಿದೆ. ಥರೇವಾರಿ ಹಾವುಗಳನ್ನು ನೋಡಿ ಊರಿನ ಜನರು ಹೌಹಾರುತ್ತಿದ್ದಾರೆ.
ತಮ್ಮನ್ನು ತಿನ್ನಲು ಬರುತ್ತಿರುವ ನವಿಲುಗಳಿಗೆ ಹೆದರಿ ಹಾವುಗಳು ತುಮಕೂರು ಜಿಲ್ಲೆಯ ಬೆಳ್ಳಾರ ಅರಣ್ಯ ವ್ಯಾಪ್ತಿಗೆ ಬರುವ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲವು ಹಳ್ಳಿಗಳಿಗೆ ನುಗ್ಗುತ್ತಿವೆ. ಈ ವ್ಯಾಪ್ತಿಯಲ್ಲಿ ನವಿಲಿನ ಸಂತತಿ ದಿನೇ ದಿನೇ ಹೆಚ್ಚುತ್ತಿದ್ದು, ಹಾವುಗಳಿಗೆ ಕುತ್ತುಂಟಾಗಿದೆ. ಪ್ರಾಣಭೀತಿಯಿಂದ ಹಾವುಗಳು ಕಾಡು, ಬೆಟ್ಟದ ಬುಡ, ಹೊಲ ಮಾಳು, ಬೇಲಿಯಿಂದ ಹೊರಬಂದು ಗ್ರಾಮಗಳಿಗೆ ನುಗ್ಗುತ್ತಿವೆ.
ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿ, ರಮನಹಳ್ಳಿ, ಸಿದ್ದನಕಟ್ಟೆ, ಹನುಮಂತನಹಳ್ಳಿ, ಮದಲಿಂಗನಮಡು, ಮಡಕೆಗುಡ್ಲು, ಕೆಂಪರಾಯನದೊಡ್ಡಿ, ದೊಡ್ಡಿಹಟ್ಟಿ, ಸಿಂಗದಹಳ್ಳಿ ಗಂಟೆಹಳ್ಳಿ ಮುಂತಾದ ಹಳ್ಳಿಗಳಲ್ಲಿ ಪ್ರತಿ ದಿನ ಜನರಿಗೆ ಥರೇವಾರಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ನಾಗರಹಾವು, ಮಂಡಲದ ಹಾವು, ಕೆರೆ ಹಾವುಗಳನ್ನು ನೋಡುವ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಹೆಚ್ಚಿದ ನವಿಲ ಸಂತತಿ: ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ಕೊಲ್ಲುವುದು ಗಂಭೀರ ಅಪರಾಧ ಎನಿಸಿಕೊಳ್ಳಲಿದೆ. ಆದ್ದರಿಂದ ಇದರ ಬೇಟೆ ಆಡುವಂತಿಲ್ಲ. ಆ ಕಾರಣದಿಂದ ಈ ಪಕ್ಷಿಗಳ ಸಂತತಿ ಹೆಚ್ಚಾಗುತ್ತಲೇ ಇದೆ. ಅಲ್ಲದೇ ಇವಕ್ಕೆ ಅಗತ್ಯವಾದ ಆಹಾರವೂ ಈ ಭಾಗದಲ್ಲಿ ಯಥೇಚ್ಛವಾಗಿ ಸಿಗುವುದರಿಂದ ಮಯೂರಗಳು ಸುಖವಾಗಿವೆ.
ಇದು ಸಂತೋಷದ ವಿಷಯವಾದರೂ ಹೊಲ ಮಾಳು, ಅಡವಿ, ಬೆಟ್ಟದ ಬುಡದಲ್ಲಿದ್ದ ಹಾವುಗಳು ಈಗ ನವಿಲಿನ ಭೀತಿಯಿಂದ ಗ್ರಾಮಗಳಿಗೆ ವಲಸೆ ಬರುತ್ತಿದೆ. ಇದರಿಂದ ಈ ಗ್ರಾಮಗಳಲ್ಲಿ ಜನರು ಉಸಿರು ಬಿಗಿ ಹಿಡಿದುಕೊಂಡು ಓಡಾಡುವಂತಾಗಿದೆ. ಹಳ್ಳಿಯ ಚರಂಡಿ, ಬಣವೆ, ಸೌದೆ ಇಟ್ಟ ಜಾಗ, ಮನೆಗಳಲ್ಲಿ, ಮನೆ ಮುಂದಿನ ಹಜಾರ, ತೋಪುಗಳು, ಕೈಮರ ಮುಂತಾದೆಡೆ ಪ್ರತಿ ದಿನ ಹಾವುಗಳು ಕಾಣ ಸಿಗುತ್ತಿವೆ.
ಹಲವಾರು ಮಂದಿಗೆ ಕಡಿತ: ಗ್ರಾಮಗಳ ತುಂಬೆಲ್ಲಾ ಹಾವುಗಳು ನುಗ್ಗುತ್ತಿದ್ದು ಕೆಲವು ಗ್ರಾಮಗಳಲ್ಲಿ ಹಾವು ಕಡಿತದಿಂದ ಜನ ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ಹಾವು ಕಡಿತದಿಂದ ಪ್ರಾಣ ಹಾನಿಯಾಗದಿದ್ದರೂ ನಿರಂತರವಾಗಿ ಹಾವಿನ ಕಡಿತಕ್ಕೆ ಜನರು ತುತ್ತಾಗುತ್ತಿದ್ದಾರೆ. ಹಾವುಗಳ ಭೀತಿಯಿಂದ ಬಸವಳಿದಿರುವ ಈ ಹತ್ತು ಗ್ರಾಮಗಳ ಗ್ರಾಮಸ್ಥರು ಈಗ ಹಾವಿಗೆ ಮುಕ್ತಿಕೊಡಿ ಎಂದು ದುಂಬಾಲು ಬೀಳಬೇಕಾಗಿದೆ.
ಉಗಮ ಶ್ರೀನಿವಾಸ್