ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೊಳೆಗೇರಿ ಜನರನ್ನು ಒಕ್ಕಲೆಬ್ಬಿಸುವುದು ಅಸಾಧ್ಯ

Mainashree
Updated On : 5 Dec 2013, 11:31 am

ಕ.ಪ್ರ.ವಾರ್ತೆ  ದೊಡ್ಡಬಳ್ಳಾಪುರ  ಡಿ.5
ಸಂಜಯನಗರ ಸರ್ಕಾರದಿಂದಲೇ ಘೋಷಿತ ಕೊಳಚೆ ಪ್ರದೇಶವಾಗಿದ್ದು, ಸುಮಾರು 30 ವರ್ಷಗಳ ಹಿಂದಿನಿಂದಲೂ ಅಸ್ತಿತ್ವ ಹೊಂದಿದೆ. ಸರ್ಕಾರವೇ ಅಧಿಕೃತವಾಗಿ ಜಿಲ್ಲಾಧಿಕಾರಿಗಳ ಮೂಲಕ ದೊಡ್ಡಬಳ್ಳಾಪುರದಲ್ಲಿ 11 ಕೊಳಚೆ ಪ್ರದೇಶಗಳನ್ನು ಗುರುತಿಸಿ ಹೇಳಿದೆ. ಹೀಗಿರುವಾಗ ಸಂಜಯನಗರದ ಜನರನ್ನು ಒಕ್ಕಲೆಬ್ಬಿಸುವುದು ಅಸಾಧ್ಯ. ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಆಗಿರುವ ಸಮಸ್ಯೆಯನ್ನು ಬಗೆ ಹರಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.
ಗುರುವಾರ ಬೆಳಗ್ಗೆ ಇಲ್ಲಿನ ಸಂಜಯನಗರಕ್ಕೆ ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಮಾತನಾಡಿದ ಅವರು, ಜನರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಬಾರದು. ಕಳೆದ 40 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಿರುವ 1 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ತಳ್ಳುವ ನಿರ್ಧಾರ ಕೈಬಿಟ್ಟು ಕೂಡಲೇ ಎಲ್ಲ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು, ಕೊಳಗೇರಿ ಮಂಡಲಿಯಿಂದ ಇಲ್ಲಿನ ಗುಡಿಸಲುಗಳಲ್ಲಿ ವಾಸಮಾಡುತ್ತಿದ್ದ ನೂರಾರು ಕುಟುಂಬಗಳಿಗೆ ವಾಸದ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಸರ್ಕಾರ ನೀರು, ಚರಂಡಿ, ಬೀದಿದೀಪ, ಶೌಚಾಲಯ ಮತ್ತು ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಸರ್ಕಾರದಿಂದ ಆಹಾರ ಭದ್ರತೆಗಾಗಿ ಪಡಿತರ ಚೀಟಿ, ಚುನಾವಣಾ ಆಯೋಗದಿಂದ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡುಗಳನ್ನು ಸಹ ಇದೇ ವಿಳಾಸಕ್ಕೆ ವಿತರಿಸಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಲಿ ಇಲ್ಲಿನ ನಿವಾಸಿಗಳ ಸಮೀಕ್ಷೆ ನಡೆಸಿ ಸ್ವಾಧೀನ ಪತ್ರ ಮತ್ತು ಬಯೋವುಟ್ರಿಕ್ ಕಾರ್ಡುಗಳನ್ನು ನೀಡಿದೆ. ಹೀಗಿದ್ದರೂ  ಇಲ್ಲಿನ ವ್ಯಕ್ತಿಯೊಬ್ಬರು ನೀಡಿರುವ ಅರ್ಜಿಯ ಆಧಾರದಲ್ಲಿ ಕಸಬಾ ಹೋಬಳಿ ವೀರಭದ್ರನಪಾಳ್ಯ ಸರ್ವೇ ನಂ.11 ಮತ್ತು 14ರ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಜನ ವಾಸವಿದ್ದಾರೆ ಎಂದು ಪರಿಗಣಿಸಿ ಅಧಿಕಾರಿಗಳು ಜಾಗ ತೆರವು ಮಾಡುವಂತೆ ಜನರಿಗೆ ಹೇಳಿರುವುದು ಖಂಡನೀಯ ಎಂದರು.
ಜಿಲ್ಲಾಧಿಕಾರಿಗಳ ಬಳಿಗೆ ನಿಯೋಗ: ಸಂಜಯನಗರ ನಿವಾಸಿಗಳ ಹಕ್ಕೊತ್ತಾಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ವಸ್ತುಸ್ಥಿತಿ ವಿವರಿಸುವ ಸಲುವಾಗಿ ಶುಕ್ರವಾರದಂದು ಇಲ್ಲಿನ ಕೆಲ ಸಾರ್ವಜನಿಕರು ಮತ್ತು ಮುಖಂಡರೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಂಕಿ-ಅಂಶಗಳನ್ನು ವಿವರಿಸಲಾಗುವುದು. ಕೊಳಗೇರಿ ವಾಸಿಗಳ ಪರ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ನರಸಿಂಹಸ್ವಾಮಿ ಘೋಷಿಸಿದರು.
ಭೇಟಿ ಸಂದರ್ಭದಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕೊಳಚೆ ಪ್ರದೇಶ ಹೋರಾಟ ಸಮಿತಿಯ ಅಧ್ಯಕ್ಷ ಶಿವಕುಮಾರ್ ಆಚಾರ್, ಕಾರ್ಯದರ್ಶಿ ಎಚ್.ಪ್ರಕಾಶ್‌ರಾವ್, ಡಿ.ವೆಂಕಟೇಶ್, ವೇಣುಗೋಪಾಲ್, ಜನಪರ ಮಂಜು, ಚಂದ್ರಶೇಖರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement