ಗ್ರಾಮೀಣಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸಾಕಮ್ಮ
ಗುಬ್ಬಿ: ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಾಕಮ್ಮ ತಿಳಿಸಿದರು.
ಗುಬ್ಬಿ ಪಟ್ಟಣದ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘ ಹಾಗೂ ತಿಗಳ ಜನಾಂಗದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಜಿಲ್ಲೆಯ ಗ್ರಾಮೀಣ
ಪ್ರದೇಶಗಳಲ್ಲಿ ನೆನೆಗುದಿಗೆ ಬಿದ್ದಿರುವ ಅಗತ್ಯ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು, ವಸತಿ, ಗ್ರಾಮೀಣ ರಸ್ತೆ ಹಾಗೂ ಗ್ರಾಮ ನೈರ್ಮಲ್ಯಗಳ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜನಾಂಗದ ಮುಖಂಡ ಸಾಗರನಹಳ್ಳಿ ನಂಜೇಗೌಡ ಮಾತನಾಡಿ ತಿಗಳ ಜನಾಂಗ ಶೈಕ್ಷಣಿಕವಾಗಿ, ಸಾಮಾಜಿವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಜನಾಂಗದವರು ಸಂಘಟಿತರಾಗುವ ಮೂಲಕ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದ ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಉತ್ತಮ ಆಡಳಿತಗಾರರಾಗಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ಮಾತನಾಡಿ ಜನಾಂಗದವರು
ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿ ಮಾಡುವತ್ತ ಚಿಂತನೆ ನಡೆಸಬೇಕೆಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಸಿ. ಕೃಷ್ಣಮೂರ್ತಿ ಮಾತನಾಡಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಜನಪರವಾದ ಕೆಲಸಗಳನ್ನು ಮಾಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ರಾಜ್ಯ ಸಂಘದ ಸಹಕಾರ್ಯದರ್ಶಿ ಎ.ಎಸ್. ಕೃಷ್ಣಯ್ಯ, ಪ್ರಾಚಾರ್ಯರಾದ ಕೋಕಿಲ, ಮುಖಂಡರಾದ ಜಿ.ವಿ. ವೀರಭದ್ರಯ್ಯ, ನಿಟ್ಟೂರು ಶಿವಣ್ಣ, ಎಚ್.ಡಿ.ನಾಗರಾಜು, ಜಿ.ಎಚ್. ಭದ್ರಯ್ಯ, ಯುವವೇದಿಕೆ ಅಧ್ಯಕ್ಷ ಜಿ.ಸಿ.ಕೃಷ್ಣಮೂರ್ತಿ, ಬಲರಾಮಯ್ಯ, ಚಂದ್ರಶೇಖರ್, ಯಜಮಾನ್ ಸಂಜೀವಯ್ಯ, ಜಿ.ಗೋವಿಂದಪ್ಪ. ಜಿ.ಬಿ.ಮಲ್ಲಪ್ಪ, ಶೆಟ್ಟಳ್ಳಯ್ಯ, ರಾಮಯ್ಯ ಮುಂತಾದವರು ಭಾಗವಹಿಸಿದ್ದರು.