ಜನಪರ ಯೋಜನೆ ಬಗ್ಗೆ ಮಾಹಿತಿ ಆಂದೋಲನ
ಕ.ಪ್ರ.ವಾರ್ತೆ ರಾಮನಗರ ಡಿ.5
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಮಾಹಿತಿ ಆಂದೋಲನವನ್ನು ನಗರದಲ್ಲಿ ಡಿ.7 ರಿಂದ 9ರವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದರು.
ಮಾಹಿತಿ ಕೊರತೆಯಿಂದಾಗಿ ಸರ್ಕಾರದ ಸಾಕಷ್ಟು ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಮೂರು ದಿನದ ಈ ಆಂದೋಲನವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ರಾಮೀಣ ಉದ್ಯೋಗ ಖಾತ್ರಿ, ಆರೋಗ್ಯ ಅಭಿಯಾನ, ಆಧಾರ್, ಭೂ ಸ್ವಾಧೀನ ಕಾಯ್ದೆ, ಸರ್ವ ಶಿಕ್ಷಣ ಅಭಿಯಾನ, ಮಾಹಿತಿ ಹಕ್ಕು, ಬಿಸಿಯೂಟ ಸೇರಿದಂತೆ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳ ಸಮಗ್ರ ಮಾಹಿತಿಯನ್ನು ಆಂದೋಲನದಲ್ಲಿ ಒದಗಿಸುವುದಾಗಿ ಅವರು ವಿವರಿಸಿದರು.
ಸ್ಥಳದಲ್ಲೇ ನೋಂದಣಿ: ಎಲ್ಲಾ ಪ್ರಮುಖ ಇಲಾಖೆಗಳು ಆಂದೋಲನದಲ್ಲಿ ಭಾಗವಹಿಸಿ, ಮಳಿಗೆ ತೆರೆದು ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಹಾಗೂ ಯಶೋಗಾಥೆಗಳ ಮೂಲಕ ಒದಗಿಸಲಿವೆ. ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಮಾಹಿತಿಯು ಲಭ್ಯವಾಗುವುದರಿಂದ ಜನಸಾಮಾನ್ಯರಿಗೂ ಅನುಕೂಲವಾಗಲಿದೆ ಎಂದರು.
ಮತದಾರರ ಪರಿಷ್ಕರಣೆ, ಆಧಾರ್ ಗುರುತಿನ ಚೀಟಿ, ಪಡಿತರ ಚೀಟಿಯ ಬಗ್ಗೆಯೂ ಮಾಹಿತಿ ಒದಗಿಸುವುದಲ್ಲದೆ, ಸ್ಥಳದಲ್ಲೇ ನೋಂದಣಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ತಿಳಿಸಿದರು.
ಗ್ರಾಮಗಳಲ್ಲೂ ಜಾಗೃತಿ: ಅಭಿಯಾನಕ್ಕೆ ಪೂರಕವಾಗಿ ಐದು ದಿನ ಕಾಲ ಜಾಗೃತಿ ಕಾರ್ಯಕ್ರಮವನ್ನು 21 ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ಪ್ರಚಾರ ಶಾಖೆಯು ಚಲನಚಿತ್ರ ಪ್ರದರ್ಶನ, ಗುಂಪು ಸಭೆ, ಕಲಾ
ತಂಡಗಳ ಮೂಲಕ ಗ್ರಾಮೀಣ ಜನರಿಗೆ ಮಾಹಿತಿ ಒದಗಿಸಲಿದೆ ಎಂದು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪಿಐಬಿ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕ ಎಸ್.ವೆಂಕಟೇಶ್ವರ್ ಹೇಳಿದರು.
ಆಂದೊಲನದಲ್ಲಿ ಸರ್ಕಾರದ ಯೋಜನೆಗಳ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. 2006ರಲ್ಲಿ ಪ್ರಾರಂಭಿಸಲಾದ ಈ ಆಂದೋಲನವನ್ನು ರಾಜ್ಯದಲ್ಲಿ ಇದುವರೆಗೆ 30 ಕಡೆ ಆಯೋಜಿಸಲಾಗಿದೆ. 2010ರಲ್ಲಿ ರಾಮನಗರ ಜಿಲ್ಲೆಯಲ್ಲಿ ಕನಕಪುರದಲ್ಲಿ ಕಾರ್ಯಕ್ರಮ ನಡೆದಿತ್ತು ಎಂದು ಅವರು ವಿವರಿಸಿದರು.
ಆಂದೋಲನದಲ್ಲಿ ವ್ಯಕ್ತವಾಗುವ ಸಾರ್ವಜನಿಕ ಅಭಿಪ್ರಾಯ, ಕುಂದು-ಕೊರತೆ, ದೂರುಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಯೋಜನೆಗಳ ನ್ಯೂನತೆಗಳನ್ನು ಸರಿಪಡಿಸುವ ಕೆಲಸದಲ್ಲಿ ನೆರವಾಗುವ ಕಾರ್ಯವನ್ನು ವಾರ್ತಾ ಶಾಖೆಯು ನಿರ್ವಹಿಸುತ್ತಿದೆ. ಇಲ್ಲೂ ಜನರು ದೂರು, ದುಮ್ಮಾನಗಳನ್ನು ಲಿಖಿತವಾಗಿ ಮತ್ತು ಮೌಖಿಕವಾಗಿ ಹೇಳಿಕೊಳ್ಳಬಹುದು ಎಂದರು.
ನಾಳೆ ಉದ್ಘಾಟನೆ: ಡಿ.7ರಂದು ಅಭಿಯಾನ ಜಾಗೃತಿ ಜಾಥಾವನ್ನು ಮಿನಿ ವಿಧಾನಸೌಧದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಹಮ್ಮಿಕೊಳ್ಳಲಾಗಿದೆ. ಜಾಥಾದಲ್ಲಿ ಅಧಿಕಾರಿಗಳು ಸೇರಿದಂತೆ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸುವರು. ಕ್ರೀಡಾಂಗಣದಲ್ಲಿ ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಆಂದೋಲನ ಉದ್ಘಾಟಿಸುವರು. ಸಂಸದ ಡಿ.ಕೆ.ಸುರೇಶ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಅಧಿಕಾರಿ ಎನ್.ಡಿ. ಪ್ರಸಾದ್ ತಿಳಿಸಿದರು.
ಕೌಶಲ್ಯ-ಉದ್ಯೋಗ ಮೇಳ: ನಿರುದ್ಯೋಗಿ ಯುವಜನತೆಯ ಅನುಕೂಳಕ್ಕಾಗಿ ಡಿಸೆಂಬರ್ ಮಾಸಾಂತ್ಯದಲ್ಲಿ ಕೌಶಲ್ಯ ಮತ್ತು ಉದ್ಯೋಗ ಮೇಳವನ್ನು ರಾಮನಗರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಹೇಳಿದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿ.ಪಂ. ಮುಖ್ಯ ಯೋಜನಾಧಿಕಾರಿ ಧನುಷ್, ಪಿಐಬಿ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ವಾರ್ತಾಧಿಕಾರಿ ಹಮೀದ್ ಖಾನ್ ಹಾಜರಿದ್ದರು.