ಪ್ರತಿಭಾ ಕಾರಂಜಿಯಲ್ಲಿ ಪ್ರತಿಭೆ ಅನಾವರಣ
ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಕ್ಲಸ್ಟರ್ಗಳ ವ್ಯಾಪ್ತಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮಕ್ಕಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಇಲ್ಲಿನ ನಗರ ಕ್ಲಸ್ಟರ್ ವ್ಯಾಪ್ತಿಯ ಸ್ಪರ್ಧೆಗಳು ಜಿ.ಕೆ. ಪ್ರೌಢಶಾಲೆಯ ಅಂಗಳದಲ್ಲಿ ನಡೆದವು.
ಕಾರ್ಯಕ್ರಮವನ್ನು ಶಾಲಾ ಕಾರ್ಯದರ್ಶಿ ಕೆ.ಜಿ.ರಘುರಾಂ ಉದ್ಘಾಟಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್, ಎನ್.ಕೆ.ರಮೇಶ್, ಕ್ರೀಡಾಪಟು ಶಿಕ್ಷಕ ಮುಖೇಶ್ಬಾಬು, ಮುಖ್ಯಶಿಕ್ಷಕಿ ಉಷಾರಾಣಿ ಮತ್ತಿತರರು ಭಾಗವಹಿಸಿದ್ದರು. ಬಹುಮಾನ ವಿತರಿಸಿದ ಗಣ್ಯರು ಮಾತನಾಡಿ, ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತವಾದ ವೇದಿಕೆ. ಮಕ್ಕಳ ಭಿನ್ನ ಆಲೋಚನೆ ಮತ್ತು ಆಸಕ್ತಿಗಳ ಅಭಿವ್ಯಕ್ತಿ ಇಲ್ಲಿ ಸಾಧ್ಯಎಂದರು. ಹಲವಾರು ವಿಭಾಗಗಳಲ್ಲಿ ಹತ್ತಾರು ಸ್ಪರ್ಧೆಗಳು ನಡೆದವು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನೂ ವಿತರಣೆ ಮಾಡಲಾಯಿತು.
ದೊಡ್ಡಬೆಳವಂಗಲ: ತಾಲೂಕಿನ ದೊಡ್ಡಬೆಳವಂಗಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮಧುರನಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆಯಿತು. ಹಾದ್ರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಎಲ್ಲ ಹಂತಗಳಲ್ಲೂ ತಮ್ಮದೇ ಆದ ಸೃಜನಶೀಲತೆ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಇದು ಉತ್ತಮ ಪ್ರಯತ್ನ ಎಂದರು. ಶಿಕ್ಷಣ ಸಂಯೋಜಕ ರಾಮಚಂದ್ರಯ್ಯ ಮಾತನಾಡಿ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಅಸಾಧಾರಣ ಪ್ರತಿಭೆಗೆ ನೀರೆರೆದು ಪೋಷಿಸಿದಾಗ ಮಾತ್ರ ಉತ್ತಮ ಬೆಳವಣಿಗೆ ಸಾಧ್ಯ ಎಂದರು.
ಹಾಡೋನಹಳ್ಳಿ: ತಾಲೂಕಿನ ಹಾಡೋನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡ ಎಚ್.ಅಪ್ಪಯ್ಯಣ್ಣ ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎ.ನಾಗರಾಜ್ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾಗವಹಿಸುವುದರಿಂದ ಮಕ್ಕಳಲ್ಲಿನ ಸಾಂಸ್ಕೃತಿಕ ಪ್ರತಿಭೆ ಬೆಳಕಿಗೆ ಬರುವುದು ಎಂದರು.
ತಾ.ಪಂ ಸದಸ್ಯ ರಮಾದೇವಿ ನಾರಾಯಣಪ್ಪ, ಎಸ್ಡಿಎಂಸಿ ಅಧ್ಯಕ್ಷ ಮುನಿರಾಜು, ಸರ್ಕಾರಿ ನೌಕರರ ಸಂಘದ ಮುಖ್ಯಸ್ಥ ನಾರಾಯಣಪ್ಪ, ಮುಖ್ಯಶಿಕ್ಷಕ ಗಂಗಯ್ಯ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು.