ಲಾರಿ-ಬಸ್ ಡಿಕ್ಕಿ, 8 ಮಂದಿಗೆ ಗಾಯ
ಸೂಲಿಬೆಲೆ: ಹೊಸಕೋಟೆ, ಕೋಲಾರ ರಾಷ್ಟ್ರೀಯ ಹೆದ್ದಾರಿ-4 ಗಂಗಾಪುರ ಗ್ರಾಮದ ಬಳಿ ಲಾರಿ ಮತ್ತು ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಯ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಸಾರಿಗೆ ಸಂಸ್ಥೆಯ ಲಕ್ಸುರಿ ಬಸ್ ತಿರುಪತಿಯಿಂದ 30 ಜನ ಪ್ರಯಾಣಿಕರನ್ನು ಹೊತ್ತು ಬೆಂಗಳೂರುನತ್ತ ಬರುತ್ತಿತ್ತು. ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಪಿ ಗಂಗಾಪುರ ಬಳಿ ಬರುತ್ತಿದ್ದ ಮರಳು ಲಾರಿಯೊಂದು ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಹಿಂಬದಿ ಡಿಕ್ಕಿಯಿಂದ ಬಸ್ ಚಾಲಕನ ನಿಯಂತ್ರಣ
ತಪ್ಪಿ ರಸ್ತೆಯ ಕೆಳ ಭಾಗಕ್ಕೆ ಬಸ್ ಬಿತ್ತು. ಬಸ್ ತಲೆ ಕೆಳೆಗಾಗಿ ಬಿದ್ದ ಕಾರಣ ಬಸ್ಸಿನಲ್ಲಿ 8 ಮಂದಿ ಗಾಯಗೊಂಡರು.
ವಿಷಯ ತಿಳಿದ ತಕ್ಷಣ ಸ್ಥಳೀಯರು ಗಾಯಗೊಂಡವರನ್ನು ಬಸ್ನಿಂದ ಹೊರಕ್ಕೆ ತಂದು ಆಸ್ಪತ್ರೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳು ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವಿಷಯ ತಿಳಿದ ನಂದಗುಡಿ ಪಿಎಸ್ಐ ಪ್ರಕಾಶ ತಮ್ಮ ಸಿಬ್ಬಂದಿಯೊಂದಿಗೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.