ಸುದ್ದಿ ಸಂಕ್ಷೇಪ
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿಗೆ ಸಹಿ ಸಂಗ್ರಹ
ತುಮಕೂರು: ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟವ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತಂದು 25 ವರ್ಷಗಳು ಸಂದಿವೆಯಾದರೂ ದೌರ್ಜನ್ಯಗಳು ಹೆಚ್ಚುತ್ತಿವೆ. ಹಾಗಾಗಿ ಕಾಯ್ದೆಯಲ್ಲಿನ ಲೋಪದೋಷಗಳನ್ನು ತೆಗೆದು ಹಾಕಲು ಹಾಗೂ ಕಾಯ್ದೆಯನ್ನು ಬಲಪಡಿಸಲು ಈ ಕಾಯ್ದೆಗೆ ಕೇಂದ್ರ ಸರ್ಕಾರ ಸೂಕ್ತ ತಿದ್ದುಪಡಿ ತರುವುದು ಅಗತ್ಯವೆಂದು ಕಾರ್ಮಿಕ ಮುಖಂಡ ಕೆ. ಮಹಂತೇಶ್ ಅವರು ಅಭಿಪ್ರಾಯಪಟ್ಟರು. ಅವರು ಸಿಪಿಐ (ಎಂ) ನಗರ ಸಮಿತಿ ರೇಲ್ವೆ ನಿಲ್ದಾಣದ ಬಳಿ ಅಯೋಜಿಸಿದ್ದ ಸಹಿ ಸಂಗ್ರಹ ಚಳುವಳಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಜಾತಿತಾರತಮ್ಯ ಮಾಡುವ ಎಲ್ಲಾ ಆಚರಣೆಗಳನ್ನು ಅಪರಾಧವಾಗಿ ಪರಿಗಣಿಸುವ ಮತ್ತು ವಿಚಾರಣೆಗೆ ಒಳಪಡಿಸುವಂತಾಗಬೇಕು. ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಗೆ ಎಲ್ಲಾ ದಲಿತರನ್ನು ಮತ್ತು ಬುಡಕಟ್ಟು ಜನಾಂಗದವರಿಗೆ ಒಳಗೊಳ್ಳಲು ಆಗ್ರಹಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಅವರು ಮಾತನಾಡಿ ಎಸ್ಸಿ, ಎಸ್ಟಿ ವಿಶೇಷ ಘಟಕ ಯೋಜನೆ ಮತ್ತು ಟಿ.ಎಸ್.ಪಿ (ಬುಡಕಟ್ಟು ಉಪ ಯೋಜನೆಗಳಿಗೆ) ಶಾಸನ ರೂಪಿಸಬೇಕು ಭೂರಹಿತ ದಲಿತರಿಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು. ಸಿಪಿಐ(ಎಂ) ನಗರ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ ಅಂತರ ಜಾತಿ ವಿವಾಹಿಗಳ ಪ್ರೋತ್ಸಾಹಿಸಿ ಅವರ ಮಕ್ಕಳಿಗೆ ಶಿಕ್ಷಣಕ್ಕೆ ಮತ್ತು ಉದ್ಯೋಗಳನ್ನು ಒದಗಿಸಬೇಕು ಎಂದರು. ವಿದ್ಯಾರ್ಥಿ ಮುಖಂಡ ಎನ್. ಶಿವಣ್ಣ ಮಾತನಾಡಿ ಜಾತಿ ತಾರತಮ್ಯ ಅಸ್ಪೃಶ್ಯತೆ ಆಚರಣೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಸರ್ಕಾರ ವಿಶಾಲವಾದ ಪ್ರಚಾರಾಂದೋಲನ ನಡೆಸಬೇಕು ಎಂದು ಒತ್ತಾಯಿಸಿದರು. ಸಿಪಿಐ (ಎಂ) ಪಕ್ಷ ಜಿಲ್ಲೆಯಲ್ಲಿ ಸಹಿ ಸಂಗ್ರಹ ಚಳುವಳಿಯು 12 ಬೇಡಿಕೆಗಳ ಆಧಾರದಲ್ಲಿ ನಡೆಸಿ ಕೆಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿಸಿದೆ.
ಬಸ್ ಚಕ್ರಕ್ಕೆ ಕಾಲು ಸಿಲುಕಿ ಮೂಳೆ ಮುರಿತ
ಗುಬ್ಬಿ: ತಾಲೂಕಿನ ನಿಟ್ಟೂರಿನ ಬಸ್ ನಿಲ್ದಾಣದಲ್ಲಿ ಬಸ್ ಚಕ್ರಕ್ಕೆ ಆಕಸ್ಮಿಕವಾಗಿ ವ್ಯಕ್ತಿಯೊಬ್ಬರ ಕಾಲು ಸಿಕ್ಕಿದ ಪರಿಣಾಮ ಅವರ ಎಡಗಾಲಿನ ಮೂಳೆ ಮುರಿದಿರುವ ಘಟನೆ ನಡೆದಿದೆ. ನಿಟ್ಟೂರಿನ ಬಸ್ ನಿಲ್ದಾಣದ ರಾಷ್ಟೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದಾಗ ಬೆಂಗಳೂರು ಕಡೆಗೆ ಹೋಗಲು ಬಂದ ಖಾಸಗಿ ಬಸ್ ಮುಂಭಾಗದ ಚಕ್ರಕ್ಕೆ ಲೋಕೇಶ್ (33) ಎಂಬ ಯುವಕನ ಕಾಲು ಸಿಕ್ಕಿ ಮೂಳೆ ಮುರಿದೆ. ತಕ್ಷಣ ಈತನನ್ನು ಸರ್ಕಾರಿ ಆಸ್ವತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
3ದಿನದ ಹೆಣ್ಣು ಮಗು ಪತ್ತೆ
ತುಮಕೂರು: ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 3 ದಿನದ ಹೆಣ್ಣು ಮಗು ದೊರೆಕಿದ್ದು, ಈ ಮಗುವಿನ ಪೋಷಕರು ಪತ್ತೆಯಾಗಿಲ್ಲ ಎಂದು ತುಮಕೂರು ಬಾಲಕಿಯರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮಗುವಿನ ಪೋಷಕರು ಯಾರಾದರೂ ಇದ್ದಲ್ಲಿ ಹೆಚ್ಚಿನ ವಿವರಗಳಿಗಾಗಿ ಅಧೀಕ್ಷಕರು, ಬಾಲಕಿಯರ ಬಾಲಮಂದಿರ, ಅಮರಜ್ಯೋತಿ ನಗರ, ತುಮಕೂರು ದೂ.ವಾ.0816-2201006 ಸಂಪರ್ಕಿಸಲು ಕೋರಿದೆ.
ವಿವಿಧ ಸ್ಪರ್ಧೆಗಳು
ತುಮಕೂರು: ಮಧುಗಿರಿ ಪಟ್ಟಣ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಸಲುವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಧುಗಿರಿ ಪಟ್ಟಣ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲಾ ಕಾಲೇಜು ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಗರಿಷ್ಟ 2 ಸಂಖ್ಯೆಯ ವಿದ್ಯಾರ್ಥಿಗಳ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಡಿಸೆಂಬರ್ 13 ರೊಳಗೆ ಪುರಸಭೆಯ ಆರೋಗ್ಯ ಶಾಖೆಯಲ್ಲಿ ಸಲ್ಲಿಸಲು ಮಧುಗಿರಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.