'ಕಲಾವಿದರು ನಿರಂತರ ಪ್ರಯೋಗ ಶೀಲರಾಗಬೇಕು'
ಚನ್ನಪಟ್ಟಣ: ಕಲಾವಿದರು ಪ್ರಯೋಗ ಶೀಲರಾಗಿದ್ದಾಗ ಮಾತ್ರ ಕಲೆ ಸಮಕಾಲೀನ ಸಮಾಜದಲ್ಲಿ ಬೆರೆತು ವಿಕಸಿತ ಗೊಳ್ಳಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ ಬಿ.ಪಿ.ಸುರೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಸಂಸ ಸಭಾಂಗಣದಲ್ಲಿ ಸಮನ್ವಯ ಟ್ರಸ್ಟ್ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಾವಿದರಲ್ಲಿ ಸೃಜನಶೀಲತೆ ಮೈಗೂಡಿದರೆ ಕಲೆಯು ಸಮಾಜದಲ್ಲಿ ಸಮನ್ವಯಗೊಂಡು ತನ್ನ ಜೀವಂತಗೊಳ್ಳುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಕಲಿ ಕಲಾವಿದರ ಹಾವಳಿ ಹೆಚ್ಚಾಗಿದ್ದು ಇವರಿಂದಾಗಿ ಕಲೆಯ ವರ್ಚಸ್ಸಿಗೆ ಧಕ್ಕೆಯಾಗಿದೆ. ಎಲೆ ಮರೆ ಕಾಯಿಯಂತಿರುವ ಮೂಲ ಕಲಾವಿದರನ್ನು ಹೊರ ತೆಗೆದು ಅವರ ಕಲಾ ಪ್ರತಿಭೆಯನ್ನು ಅನಾವರಣ ಗೊಳಿಸಲು ಅವಕಾಶ ನೀಡಿದಾಗ ಮಾತ್ರ ಕಲೆಗೆ ನಿಜವಾದ ಬೆಲೆ ಸಿಗುತ್ತದೆ ಎಂದರು.
ಡೋಂಗಿ ಕಲಾವಿದರು ಮತ್ತು ಕಲಾ ಸಂಘಟಕರ ಅಬ್ಬರದಿಂದಾಗಿ ನಿಜವಾದ ಕಲೆ ಮೂಲೆಗುಂಪಾಗಿದ್ದು ಅವುಗಳನ್ನು ಹೊರತೆಗೆಯಲು ಟ್ರಸ್ಟ್ಗಳು, ಸಾರ್ವಜನಿಕರು ಪ್ರಮಾಣಿಕ ಪ್ರಯತ್ನ ಮಾಡ ಬೇಕಿದೆ. ಕಲೆ ನಮ್ಮ ವರ್ತಮಾನದ ಸಂದೇಶಗಳನ್ನು ಭವಿಷ್ಯಕ್ಕೆ ಕೊಂಡೊಯ್ಯುವ ವಾಹಿನಿಯಾಗಿದೆ. ಇಂತಹ ಕಲೆಗೆ ಅಪಚಾರ ವೆಸಗುತ್ತಿರುವವರ ಬಗ್ಗೆ ಎಚ್ಚೆತ್ತು ಕೊಳ್ಳದಿದ್ದರೆ ನಾವೆಲ್ಲ ಭವಿಷ್ಯದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು.
ಕ್ರೀಡಾಪಟು ಪಿ.ಜೆ.ಗೋವಿಂದರಾಜು, ರಂಗಭೂಮಿ ಕಲಾವಿದ ಎಂ.ಎಸ್.ಸಿದ್ದರಾಜು ಮತ್ತಿತರರು ಮಾತನಾಡಿದರು. ಕದಂಬ ಸೈನ್ಯ ಜಿಲ್ಲಾಧ್ಯಕ್ಷ ಶಿವಕುಮಾರ್, ಶಿಲ್ಪಕಲಾ ಕಾಲಾವಿದ ಹರೀಶ್ಸಾಗರ್, ಮುಂತಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗೀತ ಗಾಯನ, ರಂಗಗೀತೆ ಕಾರ್ಯಕ್ರಮ ನಡೆದವು.