ಬುದ್ಧ, ಬಸವ, ಅಂಬೇಡ್ಕರ್ ದೇಶದ ಆಸ್ತಿ
ಕ.ಪ್ರ.ವಾರ್ತೆ ರಾಮನಗರ ಡಿ.6
ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ದೇಶದ ಅನರ್ಘ್ಯ ರತ್ನ. ಅವರು ನೀಡಿರುವ ಸಂದೇಶಗಳನ್ನು ಪಾಲಿಸಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಭವ್ಯ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಕಂದಾಯ ಭವನದಲ್ಲಿ ನಡೆದ ಅಂಬೇಡ್ಕರ್ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್ ದೇಶದ ಆಸ್ತಿ. ಅವರೆಂದೂ ಜಾತಿ, ಮತಕ್ಕೆ ಸೀಮಿತವಾದವರಲ್ಲ ಎಂದರು.
ದುಷ್ಚಟಗಳೇ ಅಡ್ಡಿ: ಸಾಧನೆಯ ಉತ್ತುಂಗಕ್ಕೆ ಏರಲು ದುಷ್ಚಟಗಳೇ ಅಡ್ಡಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು. ಶಿಕ್ಷಣದಿಂದ ವಿನಯವಂತಿಕೆ ದೊರಕುವುದು ಎನ್ನುವ ಅವರ ಸಂದೇಶ ಸಾರ್ವಕಾಲಿಕವಾದುದು ಎಂದು ಹೇಳಿದರು.
ಅಂಬೇಡ್ಕರ್ ಅವರು ಸಂವಿಧಾನಾತ್ಮಕವಾಗಿ ನಮಗೆ ದೊಡ್ಡ ಬಳುವಳಿಗಳನ್ನೇ ನೀಡಿದ್ದಾರೆ. ಅಧಿಕಾರಿಗಳು ನೌಕರರು ಸೇರಿದಂತೆ ಸರ್ವರೂ ಅಂಬೇಡ್ಕರ್ ಅವರಿಗೆ ಗೌರವ ನೀಡಬೇಕು ಎಂದು ಡಾ.ವಿಶ್ವನಾಥ್ ತಿಳಿಸಿದರು.
ಡಾ.ಅಂಬೇಡ್ಕರ್ ಚರಿತ್ರೆ ನಿರ್ಮಿಸಿದ್ದು, ಅವರು ಕೇವಲ ಭಾರತ ದೇಶಕ್ಕಲ್ಲದೆ ಇಡೀ ಪ್ರಪಂಚಕ್ಕೆ ಎಂದೂ ಕಣ್ಮರೆಯಾಗದ ನಕ್ಷತ್ರದಂತೆ ವಿರಾಜಮಾನರಾಗಿದ್ದಾರೆ ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ವಿಜಯನರಸಿಂಹ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲಿಂಗರಾಜು, ದಲಿತ ಮುಖಂಡರಾದ ರಾ.ಶಿ.ದೇವರಾಜು, ವಿ.ಮೋಹನಕುಮಾರ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ರಂಗೇಗೌಡ, ಪತ್ರಕರ್ತ ಚಲುವರಾಜು ಮತ್ತಿತರರು ಭಾಗವಹಿಸಿದ್ದರು.