ಬೊಂಬೆನಗರಿಗೆ ವಕ್ಕರಿಸಲಿದೆ ಪ್ಯೂಪ ಕೂಪ!
ಮತ್ತೀಕೆರೆ ಜಯರಾಮ್
ರಾಮನಗರ: ರೇಷ್ಮೆ ಗೂಡುಗಳ ನೂಲು ಬಿಚ್ಚಾಣಿಕೆ ನಂತರ ಸತ್ತ ಹುಳುಗಳ (ಪ್ಯೂಪ) ಸಂಸ್ಕರಣಾ ಘಟಕವೊಂದು ಚನ್ನಪಟ್ಟಣದ ವಂದಾರಗುಪ್ಪೆ ಬಳಿ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ತಲೆ ಎತ್ತುತ್ತಿದೆ.
ಘಟಕ ಪ್ರಾರಂಭವಾದರೆ ರಾಮನಗರದ ಜನತೆಯನ್ನು ಹಲವು ದಶಕಗಳಿಂದ ಕಾಡುತ್ತಿರುವ ಗಬ್ಬು ವಾಸನೆ ಇನ್ನು ಮುಂದೆ ಚನ್ನಪಟ್ಟಣ ಸುತ್ತಮುತ್ತಲಿನವರನ್ನು ಆವರಿಸಲಿದೆ.
ನಡೆದಿದೆ ಸಿದ್ಧತೆ: ಚನ್ನಪಟ್ಟಣ ಮತ್ತು ವಂದಾರಗುಪ್ಪೆ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಅನತಿ ದೂರದಲ್ಲಿ ಖಾಸಗಿ ಸಂಸ್ಕರಣಾ ಘಟಕ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ಘಟಕ ಸ್ಥಾಪಿಸಲು ರೇಷ್ಮೆ ಇಲಾಖೆಯು ತನ್ನದೇ ಸುಪರ್ದಿಯಲ್ಲಿರುವ 2 ಎಕರೆ ಜಾಗವನ್ನು ಖಾಸಗಿ ಸಂಸ್ಥೆಗೆ ಬಿಟ್ಟುಕೊಟ್ಟಿದೆ. ಘಟಕಕ್ಕೆ ವಂದಾರಗುಪ್ಪೆ ಗ್ರಾಪಂ ಪರವಾನಗಿ ನೀಡದಿರಲು ನಿರ್ಣಯಿಸಿದೆ. ಆದರೆ, ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರವನ್ನು ಅಧಿಕಾರಿಗಳ ಮಟ್ಟದಲ್ಲಿ ಪಡೆದುಕೊಳ್ಳಲಾಗಿದೆ.
ಕಟ್ಟಡ ಕಾಮಗಾರಿ ಪೂರ್ಣ: ಮಹಾಲಕ್ಷ್ಮಿ ಫರ್ಟಿಲೈಸರ್ ಮತ್ತು ಕೆಮಿಕಲ್ ಹೆಸರಿನ ಈ ಘಟಕ ಸ್ಥಾಪನೆ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸಂಸ್ಕರಣಾ ಘಟಕಕ್ಕೆ ಬಾಯ್ಲರ್ ಸಹಿತ ಯಂತ್ರೋಪಕರಣಗಳ ಅಳವಡಿಕೆ ಕಾರ್ಯವೂ ಅಂತಿಮ ಹಂತಕ್ಕೆ ತಲುಪಿದ್ದು, ಕಾರ್ಯಾರಂಭಕ್ಕೆ ಇನ್ನು ಕೆಲವೇ ದಿನಗಳಲ್ಲಿ ಸಿದ್ಧವಾಗಲಿದೆ. ಈ ಬೆನ್ನಲ್ಲೇ ವಂದಾರಗುಪ್ಪೆ ಗ್ರಾಮಸ್ಥರು ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ.
ರಾಮನಗರ ಜನತೆ ದೂರು: ರೇಷ್ಮೆನಾಡು ಎಂದೇ ಹೆಸರಾದ ರಾಮನಗರದಲ್ಲಿ ನಾಗರಿಕರ ಬದುಕು ರೇಷ್ಮೆ ನೂಲಿನಂತೆ ನವಿರಾಗೇನೂ ಇಲ್ಲ. ಈ ನಗರವನ್ನು ಗುಡಿ ಕೈಗಾರಿಕೆಗಳ ನಗರವೆಂದು ಘೋಷಿಸಲಾಗಿದೆ. ಜನ ವಸತಿ ಪ್ರದೇಶದಲ್ಲೇ ಒಂದು ಸಾವಿರಕ್ಕೂ ಹೆಚ್ಚು ನೂಲು ಬಿಚ್ಚಾಣಿಕೆ ಕೇಂದ್ರಗಳು ನಡೆಯುತ್ತಿದ್ದು, ದಿನವಹಿ 35 ರಿಂದ 40 ಟನ್ನಷ್ಟು ಪ್ಯೂಪ ತ್ಯಾಜ್ಯ ಉತ್ಪಾದನೆ ಆಗುತ್ತಿದೆ.
ಇಷ್ಟು ದೊಡ್ಡ ಮಟ್ಟದ ತ್ಯಾಜ್ಯವನ್ನು ರಾಮನಗರದ ಹುಣಸನಹಳ್ಳಿ ಮಾರ್ಗದಲ್ಲಿರುವ ಸುಮಾರು 30 ಘಟಕಗಳು ಅವೈಜ್ಞಾನಿಕ ಪದ್ಧತಿಯಲ್ಲಿ ಸಂಸ್ಕರಣೆ ಮಾಡುತ್ತಿವೆ. ಇದರಿಂದ ಸುತ್ತಮುತ್ತಲ ಪರಿಸರ ಹಾಳಾಗಿದ್ದು, ವಾಯು ಮತ್ತು ಜಲ ಮಾಲಿನ್ಯವೂ ಉಂಟಾಗಿದೆ. ಸುತ್ತಮುತ್ತಲ ವಾಸಿಗಳು, ಮಾರ್ಗದ ಸಂಚಾರಿಗಳ ಪಾಡು ಹೇಳ ತೀರದಾಗಿದೆ. ಈ ಕುರಿತು ಸಾರ್ವಜನಿಕರು ಸರ್ಕಾರಕ್ಕೆ ಅನೇಕ ಬಾರಿ ದೂರಿದ್ದರು.
ಅಧಿಕಾರಿಗಳದ್ದೇ ಮಸಲತ್ತು: ಸಾರ್ವಜನಿಕರ ದೂರನ್ನು ಸರ್ಕಾರ ಲೋಕ ಅದಾಲತ್ಗೆ ವಹಿಸಿತ್ತು. ವರ್ಷದ ಹಿಂದೆಯೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ರಾ-ಚ ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ನಗರಸಭೆ, ರೇಷ್ಮೆ ಇಲಾಖೆ, ಕೇಂದ್ರ ರೇಷ್ಮೆ ಸಂಶೋಧನಾ ಮಂಡಳಿ ಸಹಿತ ಸಂಬಂಧಿಸಿದ ಇಲಾಖೆಗಳಿಗೆ ವೈಜ್ಞಾನಿಕ ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಕಾಲಮಿತಿ ನಿಗದಿಪಡಿಸಿ ನೋಟಿಸ್ ಜಾರಿಗೊಳಿಸಿತ್ತು.
ವೈಫಲ್ಯ ಮುಚ್ಚಿಕೊಳ್ಳುವುದಕ್ಕಾಗಿ: ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳು ಪ್ಯೂಪ ವೈಜ್ಞಾನಿಕ ಸಂಸ್ಕರಣಾ ಘಟಕ ಸ್ಥಾಪನೆ ನಿಟ್ಟಿನಲ್ಲಿ ಖಾಸಗಿ ಕಂಪೆನಿಗೆ ನೆರವಾಗಿದ್ದಾರೆ. ಘಟಕಕ್ಕೆ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಗಳು ಸರ್ವ ರೀತಿಯಲ್ಲೂ ನೆರವಿಗೆ ನಿಂತಿವೆ. ಗ್ರಾಮಸ್ಥರು ವಿರೋಧಿಸಿದಾಗ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವಾಗಿದೆ.
ಅಧಿಕಾರಿಗಳ ತಾಕೀತು
ಈಗಾಗಲೇ ಫಿಲೇಚರ್ ಮಾಲೀಕರು ಮತ್ತು ವರ್ತಕರ ಸಭೆ ನಡೆಸಿರುವ ರೇಷ್ಮೆ ಇಲಾಖೆ ಅಧಿಕಾರಿಗಳು ಇನ್ನು ಮುಂದೆ ನೂಲು ಬಿಚ್ಚಾಣಿಕೆ ನಂತರ ಸತ್ತ ರೇಷ್ಮೆ ಹುಳುಗಳನ್ನು(ಪ್ಯೂಪ) ಶೀಘ್ರ ಕಾರ್ಯಾರಂಭ ಆಗಲಿರುವ ಖಾಸಗಿ ಸಂಸ್ಕರಣಾ ಘಟಕಕ್ಕೇ ನೀಡಬೇಕೆಂದು ತಾಕೀತು ಮಾಡಿದ್ದಾರೆ. ಈ ಹಿಂದೆ ದೊಡ್ಡ ಮಟ್ಟದ ಲಾಬಿ ಇದೆ ಎನ್ನುವುದು ಫಿಲೇಚರ್ ಮಾಲೀಕರು ಹಾಲಿ ಇರುವ ಪ್ಯೂಪ ಸಂಸ್ಕರಣಾ ಘಟಕಗಳ ಮಾಲೀಕರ ಆರೋಪವಾಗಿದೆ.
ಪ್ಯೂಪಕ್ಕೆ ಬೇಡಿಕೆ ಇದೆ
ನೂಲು ಬಿಚ್ಚಾಣಿಕೆ ನಂತರ ಸತ್ತ ರೇಷ್ಮೆ ಹುಳುಗಳು(ಪ್ಯೂಪ) ಫಿಲೇಚರ್ಗಳಲ್ಲಿ ಸಿಗುವ ತ್ಯಾಜ್ಯವೇ ಆಗಿದ್ದರೂ ಸಾಕಷ್ಟು ಬೇಡಿಕೆ ಹೊಂದಿದೆ. ಇದನ್ನು ಸಂಸ್ಕರಿಸಿದ ನಂತರ ಸಾಬೂನು ತಯಾರಿಕೆ, ಮೀನು ಮತ್ತು ಕೋಳಿ ಫೀಡ್ಸ್ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಇದು ಸಹಜವಾಗಿಯೇ ಲಾಬಿಯ ಆರೋಪಕ್ಕೆ ಇಂಬು ನೀಡಿದೆ.
ಚನ್ನಪಟ್ಟಣಕ್ಕೆ ಕೇಡು
ನೂತನ ಘಟಕದ ಸ್ಥಳ ಚನ್ನಪಟ್ಟಣ ನಗರವ್ಯಾಪ್ತಿಗೆ ಹೊಂದಿಕೊಂಡಿದೆ. ಸುತ್ತಲೂ ಹಿಪ್ಪು ನೇರಳೆ, ತೋಟಗಾರಿಕೆ ಬೆಳೆಗಳ ಪ್ರದೇಶವಿದೆ. ಈ ಘಟಕದಲ್ಲಿ ಪ್ಯೂಪದ ವೈಜ್ಞಾನಿಕ ಸಂಸ್ಕರಣೆ ಆದರೆ ಸಮಸ್ಯೆಯಿಲ್ಲ. ಒಂದೊಮ್ಮೆ ಅದರ ಕತೆಯೂ ರಾಮನಗರದಲ್ಲಿ ಈಗಿರುವ ಘಟಕಗಳಂತಾದರೆ ಚನ್ನಪಟ್ಟಣದ ವಿವಿಧ ಬಡಾವಣೆ, ವಂದಾರಗುಪ್ಪೆ ಸುತ್ತಮುತ್ತಲ ಜನತೆಯ ಗೋಳು ಹೇಳತೀರದು. ಘಟಕ ಸ್ಥಾಪನೆ ಬೇಡವೆಂದು ಸ್ಥಳೀಯ ಗ್ರಾಪಂ ನಿರ್ಣಯ ಅಂಗೀಕರಿಸಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾರ್ವಜನಿಕರ ಸಭೆ ಕರೆದು, ಒಪ್ಪಿಗೆ ಪಡೆಯುವ ಗೋಜಿಗೆ ಹೋಗಿಲ್ಲ. ಸುತ್ತಮುತ್ತಲ ಗ್ರಾಮ ಮತ್ತು ಚನ್ನಪಟ್ಟಣ ನಾಗರಿಕರಿಗೆ ಘಟಕದ ವಿಷಯವಾಗಿ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡುವ ಗೋಜಿಗೆ ಹೋಗಿಲ್ಲ. ಒಟ್ಟಾರೆ, ಪರಿಸರಕ್ಕೆ ಮಾರಕವಾಗುವ ಘಟಕ ಸ್ಥಾಪನೆ ಪ್ರಕ್ರಿಯೆ ಸದ್ದಿಲ್ಲದೆ ಸಾಗಿದೆ.
ಸುತ್ತಮುತ್ತಲ ಪರಿಸಕ್ಕೆ ಧಕ್ಕೆ ತಂದೊಡ್ಡುವ ಪ್ಯೂಪ ಸಂಸ್ಕರಣಾ ಘಟಕ ಸ್ಥಾಪನೆಗೆ ಪರವಾನಗಿ ನೀಡದಿರಲು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ಣಯ ಕೈಗೊಳ್ಳಲಾಗಿದೆ. ಯಾವ ಕಾರಣಕ್ಕೂ ಘಟಕ ತಲೆ ಎತ್ತಲು ಬಿಡುವುದಿಲ್ಲ.
ಟಿ ರಾಜೇಶ್, ಅಧ್ಯಕ್ಷರು, ವಂದಾರಗುಪ್ಪೆ ಗ್ರಾಪಂ