ಚುನಾಯಿತ ಪ್ರತಿನಿಧಿಗಳೇ ಶಾಲಾ ಮಕ್ಕಳ ಸಮಸ್ಯೆ, ದೂರಿಗೆ ಪ್ರತಿಕ್ರಿಯಿಸಿ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ. 7
ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ವತಿಯಿಂದ ಗ್ರಾಮ ಸಭೆ ಮತ್ತು ಮಕ್ಕಳ ಗ್ರಾಮಸಭೆ ವಿಶೇಷ ಕಾರ್ಯಕ್ರಮಗಳು ನಡೆದವು. ಮಕ್ಕಳ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಶಾಲೆಗಳ ಆವರಣಗಳಲ್ಲಿ ಬಿದ್ದಿರುವ ತ್ಯಾಜ್ಯ, ಅನೈರ್ಮಲ್ಯ, ಕಂಪ್ಯೂಟರ್ ಯಂತ್ರಗಳ ದುಸ್ಥಿತಿ, ಶಿಕ್ಷಕರ ಕೊರತೆ, ಗ್ರಾಮಗಳಲ್ಲಿನ ಬೀದಿದೀಪಗಳ ಸಮಸ್ಯೆ, ಶಾಲೆಗಳಲ್ಲಿ ಶೌಚಾಲಯ ಸಮಸ್ಯೆ, ರಸ್ತೆಗಳ ದುಸ್ಥಿತಿ, ಗ್ರಂಥಾಲಯದ ಸಮಯ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರು. ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿಕೊಡಿ. ದೊಡ್ಡಬೆಳವಂಗಲ ಶಾಲೆಯ ಮುಂದೆ ರಾಷ್ಟ್ರೀಯ ಹೆದ್ದಾರಿ ಇದೆ. ಇಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಹೀಗಾಗಿ ರಸ್ತೆ ಉಬ್ಬುಗಳು ಮತ್ತು
ಬ್ಯಾರಿಕೇಡ್ಗಳನ್ನು ರಸ್ತೆಯಲ್ಲಿ ಸ್ಥಾಪಿಸಬೇಕು. ಗ್ರಾಮದ ಬಸ್ ನಿಲ್ದಾಣ ಬಳಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಾದರಿ ಶಾಲೆಯ ಮುಖ್ಯಶಿಕ್ಷಕ ಬಿ.ಟಿ.ತಿಮ್ಮಯ್ಯ ಮಾತನಾಡಿದರು. ಮೌಲ್ಯಯುತ ವಿಚಾರಗಳ ಕುರಿತ ಚರ್ಚೆ ನಡೆದಾಗ ಮಾತ್ರ ಈ ಬಗೆಯ ಕಾರ್ಯಕ್ರಮಗಳಿಗೆ ಅರ್ಥವಿರುತ್ತದೆ. ಸರ್ಕಾರದ ವತಿಯಿಂದ ಪಂಚಾಯಿತಿಗಳಿಗೆ ಲಭ್ಯವಾಗುವ ಅವಕಾಶಗಳ ಮೂಲಕ ಉನ್ನತವನ್ನು ಸಾಧಿಸುವ ಮಹೋದ್ದೇಶ ಹೊಂದಿರಬೇಕು. ಹೀಗಾಗಿ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಸಂಬಂಧಪಟ್ಟ ಇಲಾಖೆ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಅವರ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿ ಶೀಘ್ರವೇ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಉತ್ತಮ ಸಲಹೆ-ಸೂಚನೆಗಳಿಗೆ ಸ್ವಾಗತ ಎಂದರು.
ಇದೇ ಸಂದರ್ಭದಲ್ಲಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ವಿವಿಧ ಇಲಾಖೆಗಳಲ್ಲಿನ ಯೋಜನೆಗಳ ಕುರಿತು ಮಾಹಿತಿ ವಿನಿಮಯ ನಡೆಯಿತು. ನೋಡಲ್ ಅಧಿಕಾರಿ ವಿ.ಎಂ.ರೂಪ, ಗ್ರಾ.ಪಂ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ನಾಗರಾಜ್, ದಯಾನಂದ್, ಮುನಿಯಪ್ಪ, ಅನುರಾಧ, ಚಂದ್ರಶೇಖರ್, ಚೌಡಯ್ಯ, ಕುಮಾರಸ್ವಾಮಿ, ನಾಗೇಶ್ ಮತ್ತು ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.