ಜಿಲ್ಲೆಯ ಪುರಪಿತೃಗಳಿಗೆ ದಕ್ಕದ ಅಧಿಕಾರ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಡಿ. 7
ರಾಜ್ಯದ ಬಹುತೇಕ ಪೌರ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಆದರೆ, ರಾಮನಗರ ಸಹಿತ ಈ ಜಿಲ್ಲೆಯ ನಾಲ್ಕೂ ಪೌರ ಸಂಸ್ಥೆಗಳಲ್ಲಿ 9 ತಿಂಗಳಿಂದ ಚುನಾಯಿತ ಪುರಪಿತೃಗಳು ಅಧಿಕಾರ ರಹಿತರಾಗಿದ್ದಾರೆ. ಈ ಸಂಸ್ಥೆಗಳಲ್ಲಿ ಅಧಿಕಾರಿಗಳ ಕಾರುಬಾರು ಜೋರಾಗಿದೆ.
ಈ ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳು, ಮಾಗಡಿ ಮತ್ತು ಕನಕಪುರ ಪುರಸಭೆಗಳಿಗೆ ಕಳೆದ ಮಾ.7ರಂದು ಚುನಾವಣೆ ನಡೆದು, ಮಾ.11ಕ್ಕೆ ಫಲಿತಾಂಶ ಪ್ರಕಟವಾಯಿತು. ಆದರಿನ್ನೂ ಪದಗ್ರಹಣ ಭಾಗ್ಯವಿಲ್ಲದೆ ಅತಂತ್ರರಾಗಿರುವ 112 ಚುನಾಯಿತ ಪ್ರತಿನಿಧಿಗಳು ಪರಿತಪಿಸುತ್ತಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲು ನಿಗದಿ ಸಂಬಂಧ ಹೈಕೋರ್ಟ್ನಲ್ಲಿ ತಕಾರರು ಅರ್ಜಿ ಇನ್ನೂ ಇತ್ಯರ್ಥ ಆಗದಿರುವ ಪರಿಣಾಮ ರಾಜ್ಯದ ಕೆಲ ಪೌರ ಸಂಸ್ಥೆಗಳಲ್ಲಿ ನೂತನ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿಲ್ಲ. ತಡೆಯಾಜ್ಞೆಗೂ ಮುನ್ನ ವರಿಷ್ಠರ ಸ್ಥಾನಗಳ ಚುನಾವಣೆ ನಿಗದಿಯಾಗಿದ್ದ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಅಡ್ಡಿಯಾಗಿಲ್ಲ.
ಎಡಬಿಡಂಗಿ ಸ್ಥಿತಿ: ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದ ಪೌರ ಸಂಸ್ಥೆಗಳ ಪುರಪಿತೃಗಳ ಸ್ಥಿತಿ ಸಾಕ್ಷಾತ್ ಎಡಬಿಡಂಗಿಯಂತಾಗಿದೆ. ಸಂಸ್ಥೆಗೆ ಅವರಿನ್ನೂ ಅಧಿಕೃತ ಪ್ರತಿನಿಧಿಗಳೆನ್ನುವ ಅಧಿಕಾರ ಪಡೆದಿಲ್ಲ. ಆದರೆ, ಚುನಾಯಿಸಿದ ಜನರ ದೂರು, ದುಮ್ಮಾನಗಳಿಗೆ ಮಾತ್ರ ಹೊಣೆಯಾಗಬೇಕಾದ ಪರಿಸ್ಥಿತಿಯಲ್ಲಿ ಅವರಿದ್ದಾರೆ.
ತಮ್ಮ ವಾರ್ಡ್ ವ್ಯಾಪ್ತಿಯ ಕೊಳಾಯಿಯಲ್ಲಿ ನೀರು ಬಾರದಿದ್ದರೆ, ಚರಂಡಿ ಅಥವಾ ಒಳ ಚರಂಡಿ ಕಟ್ಟಿಕೊಂಡರೆ, ರಸ್ತೆ ಹದಗೆಟ್ಟರೆ ಅಧಿಕಾರ ರಹಿತ ಪುರಪಿತೃಗಳಿಗೇ ಜನರು ಗಂಟು ಬೀಳುತ್ತಾರೆ. ಬಿಪಿಲ್ ಕಾರ್ಡ್, ವಿವಿಧ ಪರವಾನಗಿ ಮತ್ತು ದೃಢೀಕರಣ ಪತ್ರಗಳ ವಿತರಣೆಗೂ ಈ ಪ್ರತಿನಿಧಿಗಳನ್ನೇ ಆಶ್ರಯಿಸಲಾಗುತ್ತಿದೆ.
ಅಧಿಕಾರ ಮರೀಚಿಕೆ: ಕನಕಪುರ, ಮಾಗಡಿ ಪುರಸಭೆಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದ್ದರೆ, ಚನ್ನಪಟ್ಟಣ ನಗರಸಭೆ ಜೆಡಿಎಸ್ ಪಾಲಾಗಿದೆ. ಇನ್ನು ರಾಮನಗರ ನಗರಸಭೆಯಲ್ಲಿ ಅತಂತ್ರ ಸ್ಥಿತಿ ತಲೆದೋರಿದೆ. ನಾಲ್ಕೂ ಕಡೆ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ಆರಂಭಿಸಿದ್ದವರಿಗೂ ಸಾಕಷ್ಟು ನಿರಾಸೆಯಾಗಿದೆ.
ಸರ್ಕಾರ ಈ ಹಿಂದೆ ಪ್ರಕಟಿಸಿದ್ದ ಮೀಸಲಾತಿಯೇ ಮುಂದುವರೆಯಲಿ ಎಂದು ಸದರಿ ಮೀಸಲಿನಡಿ ಹುದ್ದೆ ಗಿಟ್ಟಿಸಲು ಯತ್ನಿಸುತ್ತಿರುವವರು ಹರಕೆ ಹೊತ್ತಿದ್ದಾರೆ. ಒಂದೊಮ್ಮೆ ಹೈಕೋರ್ಟ್ನಲ್ಲಿ ಮೀಸಲು ಬದಲಾವಣೆ ಆದೇಶ ಹೊರ ಬಿದ್ದರೂ ಬಿಳಬಹುದು, ಆಗ ಒಂದು ಕೈ ನೋಡಿಯೇ ಬಿಡೋಣವೆಂದು ಮತ್ತೆ ಕೆಲವರು ಹಂಬಲಿಸುತ್ತಿರುವುದೂ ಉಂಟು.
ಅಧಿಕಾರಿಗಳ ಕಾರುಬಾರು: ಚುನಾವಣೆಗೆ ಎರಡು ವಾರ ಮುನ್ನವೇ ಇಲ್ಲಿನ ನಾಲ್ಕೂ ಪೌರ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು. ಆಡಳಿತಾಧಿಕಾರಿಗಳು ಅಧಿಕಾರ ವಹಿಸಿಕೊಂಡರೇ ಹೊರತು ಅಲ್ಲಿನ ಆಗುಹೋಗುಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರ ವಹಿಸಿಕೊಂಡಿದ್ದನ್ನು ಹೊರತುಪಡಿಸಿದರೆ ಮತ್ತೆ ಆ ಸಂಸ್ಥೆಯ ಕಡೆ ತಲೆ ಹಾಕದ ಆಡಳಿತಾಧಿಕಾರಿಗಳೂ ಇದ್ದಾರೆ.
ಕಚೇರಿಗೆ ಬಾರದ ಆಡಳಿತಾಧಿಕಾರಿಗಳ ಬೇಜವಬ್ದಾರಿತನದ ಪರಿಣಾಮ ಪೌರ ಸಂಸ್ಥೆಗಳಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರುಬಾರು ಜೋರಾಗಿದೆ. ಅವರಿಗೆ ಈಗ ಹೇಳೋರು ಕೇಳೋರು ಇಲ್ಲದಂತಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಅಷ್ಟಕ್ಕಷ್ಟೇ. ಕಾಮಗಾರಿಗಳ ಹೆಸರಿನಲ್ಲಿ ಹಣ ಮಂಜೂರಾತಿಗೆ ಮಾತ್ರ ಇಲ್ಲಿ ಬರವಿಲ್ಲ.
ಸಕಾಲಕ್ಕೆ ಬರುತ್ತಿಲ್ಲ: ರಾಜ್ಯ ಸರ್ಕಾರವು ಸಾಕಷ್ಟು ಅರ್ಜಿಗಳ ವಿಲೇವಾರಿಗೆ ಸಕಾಲ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಸಕಾಲ ಸೇವೆಯೂ ಸಮರ್ಪಕವಾಗಿಲ್ಲ. ಮೂಗುದಾರವಿಲ್ಲದ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿಗೆ ಬರುವ ಸಮಯವೂ ಸಕಾಲವಾಗದೆ ಅಕಾಲವಾಗಿದೆ. ಸಾಕಷ್ಟು ವಿಭಾಗಗಳಲ್ಲಿ ಸಿಬ್ಬಂದಿ ಕುರ್ಚಿಯಲ್ಲಿ ಕುಳಿತಿದ್ದೇ ಅಪರೂಪವಾಗಿದೆ.
ಸಾರ್ವಜನಿಕರು ಸಮಸ್ಯೆ ಹೊತ್ತು ಬಂದರೆ ಪರಿಹರಿಸುವ ಬದಲು ಸಾಗ ಹಾಕುವ ಕೆಲಸವಾಗುತ್ತಿದೆ. ಅಧಿಕಾರಿಗಳಿಗೆ ಆಯಾ ಸಂಸ್ಥೆಯ ವ್ಯಾಪ್ತಿಯ ಚಿತ್ರಣವೇ ಇಲ್ಲ. ದೂರು, ದುಮ್ಮಾನಗಳ ಪರಿಹಾರಕ್ಕೆ ಕಾಳಜಿ ಇಲ್ಲ. ಹೀಗಾಗಿ ಚುನಾಯಿತ ಆಡಳಿತ ವ್ಯವಸ್ಥೆ ಎಷ್ಟು ಬೇಗ ಅಸ್ತಿತ್ವಕ್ಕೆ ಬರುವುದೋ ಎಂದು ಬಸವಳಿದ ಜನರು ಬಯಸಿದ್ದಾರೆ.
ಸಮಸ್ಯೆಗೆ ಸ್ಪಂದನೆ ಇಲ್ಲ
ಪೌರ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಯ ಅಧಿಕಾರ ಬಂದ ನಂತರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನ ಇಲ್ಲ. ಆಡಳಿತಾಧಿಕಾರಿಗಳು ಸಂಸ್ಥೆ ಕಡೆ ಸುಳಿಯುತ್ತಿಲ್ಲ. ಈ ವ್ಯವಸ್ಥೆ ಆದಷ್ಟು ಬೇಗ ಕೊನೆಗೊಂಡು, ಚುನಾಯಿತ ಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುವುದು ಸೂಕ್ತ.
ಟಿ ರವಿಕುಮಾರ್, 21ನೇ ವಾರ್ಡ್ ಪುರಪಿತೃ, ರಾಮನಗರ.