ದೇವರು ನಮ್ಮೊಳಗೇ ಇದ್ದಾನೆ: ತ್ಯಾಗೀಶ್ವರಾನಂದಜೀ ಮಹಾರಾಜ್
ಚನ್ನಪಟ್ಟಣ: ದೇವರನ್ನು ಎಲ್ಲೆಲ್ಲೋ ಹುಡುಕುವ ನಮಗೆ ದೇವರು ನಮ್ಮೊಳಗೇ ಇದ್ದಾನೆ ಎಂಬ ಸತ್ಯ ಅರಿವಾಗಿಲ್ಲ, ನಮ್ಮೊಳಗಿನ ದೇವರನ್ನು ಕಾಣಲು ಆತ್ಮ ವಿಶ್ವಾಸ ಮತ್ತು ಸದಾಚಾರ ಮೈಗೂಡಿಸಿ ಕೊಳ್ಳಬೇಕಿದೆ ಎಂದು ಬೆಂಗಳೂರು ರಾಮಕೃಷ್ಣ ಮಠದ ಶ್ರೀತ್ಯಾಗೀಶ್ವರಾನಂದಜೀ ಮಹಾರಾಜ್ ತಿಳಿಸಿದರು.
ಸ್ವಾಮಿ ವಿವೇಕಾನಂದ ರಥಯಾತ್ರಾ ಸಮಿತಿ ಹಮ್ಮಿಕೊಂಡಿದ್ದ ವಿವೇಕಾನಂದ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಳ್ಳೆಯ ಕೆಲಸ, ಒಳ್ಳೆಯ ನಡತೆ, ಒಳ್ಳೆಯ ಮಾತುಗಳು ಮಾನವನ್ನು ಭಗವಂತನ ಸಮೀಪಕ್ಕೆ ಕರೆದೊಯ್ಯುವ ಹಾದಿಯಾಗಿದ್ದು ಇತ್ತೀಚಿನ ದಿನಗಳಲ್ಲಿ ನಾವು ಸ್ವಾರ್ಥ, ಲೋಲುಪತೆಗೆ ಸಿಲುಕಿ ಇವೆಲ್ಲವನ್ನು ಮರೆಯುತ್ತಿದ್ದೇವೆ ಇದರಿಂದಾಗಿ ಕೇವಲ ವ್ಯಕ್ತಿ ಮಾತ್ರ ಹಾಳಾಗದೆ ಇಡೀ ವ್ಯವಸ್ಥೆಯೂ ಹಾಳಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರಿನ ಸುಕಾತ್ಮಾನಂದ ಮಹಾರಾಜ್, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಒಂದು ಆದರ್ಶವನ್ನು ನಂಬಿ ಬದುಕ ಬೇಕಾದ್ದು ಅಗತ್ಯ. ಹಾಗೆಂದು ಕಳಪೆ ಆದರ್ಶವನ್ನು ಅಳವಡಿಸಿ ಕೊಳ್ಳುವುದು ಅಪರಾಧವಾಗಿದ್ದು ಇದರಿಂದಾಗಿ ಜೀವನದ ಸಾಧನೆಯ ಹಾದಿಗಳು ಬಂದಾಗಿ ಎನನ್ನೂ ಸಾಧಿಸಲಾಗದಂತೆ ಸನ್ನಿವೇಶ ನಿರ್ಮಾಣ ಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನಮ್ಮ ದೇಶಕ್ಕೆ ನೀಡಿದ ವಿವೇಕಾನಂದರು ಮಾಹಾನ್ ವ್ಯಕ್ತಿಯಾಗಿದ್ದು ಇವರ ಆದರ್ಶ ಚಿರನೂತನ ವಾದುದು ಎಂದರು.
ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯೀ, ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ವಿರಕ್ತಮಠದ ಶಿವರುದ್ರಸ್ವಾಮೀಜಿ ಆಶೀರ್ವಚನ ನೀಡಿದರು.