ಪುಸ್ತಕಗಳ ಬಿಡುಗಡೆ
ದೊಡ್ಡಬಳ್ಳಾಪುರ: ಇಲ್ಲಿನ ವಿಭಾಶ್ರೀ ಪ್ರಕಾಶನ ಹೊರತಂದಿರುವ ಎಂ.ಎಸ್.ಸಂಪತ್ತಯ್ಯಂಗಾರ್ ಅವರ ಸುಗುಣ ಕುಬೇರ ಮತ್ತಿತರ ಕಥೆಗಳು, ನಾಳೆ ತಿಂಡಿ ಏನು ಮತ್ತು ಸದರನ್ ಫ್ಲೇವರ್ಸ್ ಕೃತಿಗಳ ಬಿಡುಗಡೆ ಕಾರ್ಯಕ್ರಮ ಡಿ.8ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಇಲ್ಲಿನ ವಾಸವಿ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ. ಥಟ್ ಅಂತ ಹೇಳಿ ಕಾರ್ಯಕ್ರಮ ನಿರೂಪಕ ಡಾ.ನಾ.ಸೋಮೇಶ್ವರ ಅಧ್ಯಕ್ಷತೆ ವಹಿಸಲಿದ್ದು, ಕತೆಗಾರ ಎಸ್.ದಿವಾಕರ್, ಆಹಾರ ತಜ್ಞ ಡಾ.ಕೆ.ಸಿ.ರಘು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪಿವಿಸಿ ಘಟಕ ಉದ್ಘಾಟನೆ
ದೊಡ್ಡಬಳ್ಳಾಪುರ: ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ದೊಡ್ಡಬಳ್ಳಾಪುರ ತಾಲೂಕು ಘಟಕದ ನೇತೃತ್ವದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣೆ ಅಂಗವಾಗಿ ತಾಲೂಕಿನ ಮುತ್ತೂರು ಮತ್ತು ಸಿದ್ದೇನಾಯಕನಹಳ್ಳಿ ಗ್ರಾಮ ಶಾಖೆಗಳ ಉದ್ಘಾಟನಾ ಕಾರ್ಯಕ್ರಮ ಡಿ.8ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಪ್ರತಿಭಟನೆ ಇಂದು
ದೊಡ್ಡಬಳ್ಳಾಪುರ: ಪಂಕ್ತಿಭೇದ, ಮಡೆಸ್ನಾನ ಆಚರಣೆ ವಿರೋಧಿಸಿ ಮತ್ತು ಪ್ರಸ್ತಾವಿತ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲೂಕು ಸಿಪಿಐ (ಎಂ) ನೇತೃತ್ವದಲ್ಲಿ ಡಿ.8ರ ಭಾನುವಾರ ಸಂಜೆ 5 ಗಂಟೆಗೆ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಬೆಳೆಯುತ್ತಿರುವ ಜಾತಿವಾದ ಈ ದೇಶಕ್ಕೆ ಆತಂಕಕಾರಿ. ಜಾತ್ಯತೀತ ಪ್ರಜ್ಞೆ ಸಾರ್ವತ್ರೀಕರಣಗೊಳ್ಳಬೇಕು ಎಂದಿದೆ.