ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮತ್ತೆ ಗೈರಾದ ಉಸ್ತುವಾರಿ ಸಚಿವರು

Rashmi Kasaragodu
Updated On : 8 Dec 2013, 1:05 am

ರಾಮನಗರ: ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರದ್ದು ಈ ಜಿಲ್ಲೆ ಪಾಲಿಗೆ ಚಲನಚಿತ್ರಗಳಲ್ಲಿರುವ ಪೋಷಕ ನಟನ ಪಾತ್ರದಂತಾಗಿದೆ. ರಾಜ್ಯದ ಇತರೆ ಎಲ್ಲ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಸಕ್ರಿಯರಾಗಿದ್ದರೂ ರಾಮನಗರಕ್ಕೆ ನಿರ್ಲಿಪ್ತರೇ ಉಸ್ತುವಾರಿ ಸಚಿವರಾಗಿ ಬರುತ್ತಿದ್ದಾರೆ.  ಜಾರ್ಜ್ ಅವರು ಈ ಜಿಲ್ಲೆಗೆ ನಿಯೋಜನೆಗೊಂಡಿರುವ 10ನೇ ಉಸ್ತುವಾರಿ ಸಚಿವರು. ಇವರಂತೆಯೇ ಇತರೆ 8 ಮಂದಿಯೂ ಜಿಲ್ಲೆ ಪಾಲಿಗೆ ಹೊರಗಿನವರೇ. ಹೀಗೆ ಹೊರಗಿನಿಂದ ಬಂದವರಿಗೆ ಈ ಜಿಲ್ಲೆ ಆಗುಹೋಗುಗಳ ಬಗ್ಗೆ, ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ನಿಟ್ಟಿನಲ್ಲಿ ಕಾಳಜಿ ಕಾಣದಾಗಿದೆ.  ಕಡೇಪಕ್ಷ ಪ್ರಮುಖ ಕಾರ್ಯಕ್ರಮ, ಸಭೆ-ಸಮಾರಂಭ, ರಾಷ್ಟ್ರೀಯ ಮತ್ತು ನಾಡ ಹಬ್ಬಳಿಗೆ ಆಗಮಿಸುವುದೂ ತೀರಾ ವಿರಳ. ಜಾರ್ಜ್ ಅವರು ಹೇಳಿ ಕೇಳಿ ಗೃಹ ಇಲಾಖೆಯಂತಹ ಆಯಕಟ್ಟಿನ ಇಲಾಖೆ ಸಚಿವರಾಗಿರುವುದು ಈ ಜಿಲ್ಲೆ ಬಗ್ಗೆ ನಿರ್ಲಕ್ಷ್ಯಕ್ಕೆ ಮತ್ತೊಂದು ಕಾರಣವೂ ಹೌದು.  ಈ ಸರ್ಕಾರ ಬಂದು ಆರು ತಿಂಗಳಾಗಿದೆ. ಉಸ್ತುವಾರಿ ಸಚಿವರು ಕಡೇ ಪಕ್ಷ ತಿಂಗಳಿಗೊಂದು ಭೇಟಿಯನ್ನೂ ನೀಡಿಲ್ಲ. ಈಚೆಗೆ ಬೆಂಗಳೂರಿನಲ್ಲೇ ಅಧಿಕಾರಿಗಳ ಸಭೆ ನಡೆಸಿ, ಕೈತೊಳೆದುಕೊಂಡಿದ್ದಾರೆ. ಶನಿವಾರ ನಡೆದ ಭಾರತ ನಿರ್ಮಾಣ ಆಂದೋಲನದ ಉದ್ಘಾಟನೆಗೂ ಬೆನ್ನು ತೋರಿ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರೆ.
ಜಿ.ಪಂ. ಅಧ್ಯಕ್ಷರಿಂದ ಕೆಡಿಪಿ ಸಭೆಗೆ ಸಿದ್ಧತೆ
ರಾಮನಗರ: ಜಿಲ್ಲೆಯು ಅಭಿವದ್ಧಿ ವಿಷಯದಲ್ಲಿ ಮಕಾಡೆ ಮಲಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಈ ಜಿಲ್ಲೆ ಈ ಬಾರಿ 27ನೇ ಸ್ಥಾನಕ್ಕೆ ಕುಸಿದಿದೆ.  ಮೊನ್ನೆಯಷ್ಟೇ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಕ್ಕಿಂತ ಕಚ್ಚಾಟಕ್ಕೆ ಕಾಲ ವ್ಯರ್ಥ ಮಾಡಿದರು. ನರೇಗಾ ಅನುಷ್ಠಾನದಲ್ಲಿ ಹಿನ್ನಡೆ ವಿಷಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರಲೇ ಇಲ್ಲ.  ಕಾಲುಬಾಯಿ ಜ್ವರದ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯದ್ದೇ ದೊಡ್ಡ ಮಟ್ಟದ ಚರ್ಚೆಯಾಯಿತು. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಹಗ್ಗ ಜಗ್ಗಾಟದ ಲಾಭ ಅಧಿಕಾರಿಗಳಿಗೆ ಆಗುತ್ತಿರುವುದಕ್ಕೆ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳೇ ಸಾಕ್ಷಿ.
ಹೀಗೆ ವೃಥಾ ಕಾಲ ಹರಣದಲ್ಲಿ ಸಾಮಾನ್ಯ ಸಭೆಯನ್ನು ದೂಡಿದ ಅಧ್ಯಕ್ಷರು ಈಗ ಮತ್ತೊಂದು ಪ್ರಗತಿ ಪರಿಶೀಲನಾ ಸಭೆಗೆ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಡಿ.12ರಂದು ಬೆಳಗ್ಗೆ 11ಕ್ಕೆ ಸಭೆ ಕರೆದಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಾದರೂ ನರೇಗಾ ಅನುಷ್ಠಾನ ವೈಫಲ್ಯ, ಅಭಿವೃದ್ಧಿ ಹಿನ್ನಡೆ ಬಗ್ಗೆ ಗಂಭೀರ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಚಾಟಿ ಬೀಸುವ ಕೆಲಸಕ್ಕೆ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಮುಂದಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement