ರೇಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಂಸದ ಡಿ.ಕೆ.ಸುರೇಶ್ ಸಭೆ
ಚನ್ನಪಟ್ಟಣ: ಪಟ್ಟಣದ ಎಲೇಕೇರಿ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ರೇಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೇಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಂಸದ ಡಿ.ಕೆ.ಸುರೇಶ್ 2 ತಾಸು ಕಾಲ ಸಭೆ ನಡೆಸಿದರು.
ಎಲೇಕೇರಿ ಹಾಗೂ ಈ ಮೂಲಕ ಹಾಯ್ದು ಹೋಗುವ ಸಾರ್ವಜನಿಕರಿಗೆ ರೇಲ್ವೆ ಗೇಟ್ನಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಈ ಮಾರ್ಗದ ಮೂಲಕ ಆಸ್ಪತ್ರೆ ಸೇರಿದಂತೆ ತುರ್ತಾಗಿ ಪಟ್ಟಣ ಪ್ರದೇಶಕ್ಕೆ ತಲುಪ ಬೇಕಾದ ಮಂದಿಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂ-ಮದ್ದೂರಿನ ವರೆಗೆ ಜೋಡಿ ಮಾರ್ಗನಿರ್ಮಾಣ ಗೊಂಡ ಬಳಿಕ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ರೇಲ್ವೆ ಗೇಟ್ ಬಳಿ ಗಂಟೆಗಟ್ಟಲೆ ಪ್ರಯಾಣಿಕರು ಕಾಯ್ದು ನಿಲ್ಲುವಂತಾಗಿದ್ದು ಅಂಡರ್ ಪಾಸ್ ನಿರ್ಮಾಣ ಜರೂರಾಗಿ ನಡೆದಷ್ಟು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಪಟ್ಟಣದ ವೀರಭದ್ರ ಸ್ವಾಮಿ ದೇವಾಲಯದ ರಸ್ತೆಯಿಂದ ಎಲೇಕೇರಿ ವರೆಗೆ ಕೆಳಸೇತುವೆ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದ್ದು ಈ ಬಗ್ಗೆ ರೇಲ್ವೆ ಇಲಾಖೆ ಎಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿದರು.