'ಆಪರೇಷನ್ ಗ್ರಾಮಸಿಂಹ' ಬೀದಿನಾಯಿ ಕಾರ್ಯಾಚರಣೆ
ಮಾಗಡಿ: ಪಟ್ಟಣದಲ್ಲಿ ಗ್ರಾಮ ಸಿಂಹಗಳಂತಿದ್ದ ಬೀದಿ ನಾಯಿಗಳ 'ಆಪರೇಷನ್ ಗ್ರಾಮಸಿಂಹ' ಬೀದಿನಾಯಿಗಳ ಕಾರ್ಯಾಚರಣೆ ಕಳೆದ 2 ದಿನಗಳಿಂದ ನಡೆದಿದೆ.
ಮಾಗಡಿ ಪಟ್ಟಣದಲ್ಲಿ ನಾಯಿಗಳ ಹಾವಳಿಯಿಂದ ನಾಗರಿಕರು ಕಂಗಾಲಾಗಿ ಹೋಗಿದ್ದರು. ಯಾವ ರಸ್ತೆಯಲ್ಲಿ ನೋಡಿದರೂ ಬೌ..ಬೌ..ಎಂದು ಬೊಗಳುತ್ತಾ ನಾಗರಿಕರ ಮೈಮೇಲೆರಗಿ ಕಚ್ಚಲು ಮುಂದಾಗುತ್ತಿದ್ದವು. ಬೀದಿ ನಾಯಿಗಳ ಹಾವಳಿಯಿಂದ ಪುರನಾಗರೀಕರು ಭಯದ ಭೀತಿಯಲ್ಲಿಯೇ ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿಯಿತ್ತು. ಇದರಿಂದಾಗಿಯೇ ಪುರನಾಗರಿಕರಿಗೆ ಬೀದಿ ನಾಯಿಗಳು ಗ್ರಾಮ ಸಿಂಹಗಳಾಗಿ ಕಂಡು ಬಂದಿದ್ದವು. ಕೊನೆಗೂ ನಾಗರಿಕರ ದೂರುಗಳಿಗೆ ಸ್ಪಂದಿಸಿರುವ ಪುರಸಭೆ, ಈಗ ಕೇರಳದಿಂದ ನಾಯಿಗಳನ್ನು ಹಿಡಿಯುವವರನ್ನು ಕರೆತಂದು ಬೀದಿನಾಯಿಗಳ ಕಾರ್ಯಾಚರಣೆ ಗುರುವಾರದಿಂದ ಆರಂಭಗೊಂಡಿದೆ. ತಂತಿ ಉರುಳಿನಿಂದ ನಾಯಿಯ ಕೊರಳಿಗೆ ಹಾಕಿ ಕೊಲ್ಲದಂತೆ ಬಿಗಿದು, ನಂತರ ಟೆಂಪೋಗಳಿಗೆ ತುಂಬಿ ಬೇರೆಡೆಗೆ ಬಿಡುವ ಕೆಲಸ ನಡೆದಿದೆ. ಒಂದು ನಾಯಿಯನ್ನು ಹಿಡಿದು ಬೇರೆಡೆಗೆ ಬಿಟ್ಟು ಬರಲು 150 ರು ನಿಗದಿಪಡಿಸಿಕೊಂಡಿದ್ದು, ಕಾರ್ಯಾಚರಣೆ ಶುಕ್ರವಾರವೂ ಜರುಗಿತು.