ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ತಿರಸ್ಕರಿಸಿದ ಜನತೆ

Mainashree
Updated On : 8 Dec 2013, 11:24 am

ಕ.ಪ್ರ. ವಾರ್ತೆ  ದೊಡ್ಡಬಳ್ಳಾಪುರ  ಡಿ. 8
ಉತ್ತರ ಭಾರತದ 4 ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವಿವಿಧ ಘಟಕಗಳ ನೇತೃತ್ವದಲ್ಲಿ ಭಾನುವಾರ ಸಂಭ್ರಮಾಚರಣೆ, ವಿಜಯೋತ್ಸವ ನಡೆಸಲಾಯಿತು.
ಇಲ್ಲಿನ ಡಿಕ್ರಾಸ್, ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಸಿದ್ಧಲಿಂಗಯ್ಯ ವೃತ್ತ, ತಾಲೂಕು ಕಚೇರಿ ವೃತ್ತ ಸೇರಿದಂತೆ ವಿವಿಧೆಡೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡರು, ಮುಂಬರುವ ದಿನಗಳಲ್ಲಿ ದೇಶದಲ್ಲಿ
ಬದಲಾವಣೆಯ ಬಿರುಗಾಳಿ ಬೀಸಲಿದೆ ಎಂಬುದಕ್ಕೆ 4 ರಾಜ್ಯಗಳ ಚುನಾವಣಾ ಫಲಿತಾಂಶ ಸ್ಪಷ್ಟ ದಿಕ್ಸೂಚಿಯಾಗಿದೆ. ನರೇಂದ್ರ ಮೋದಿ ಭವಿಷ್ಯದ ಪ್ರಧಾನಿ ಎಂಬುದಕ್ಕೆ ಸಿಕ್ಕ ಮೊದಲ ಅದ್ಭುತ ಯಶಸ್ಸು ಇದಾಗಿದೆ. ಇದೇ ರೀತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಧೂಳೀಪಟವಾಗಲಿವೆ. ಜನ ಅಧಿಕಾರಸ್ಥ ಕಾಂಗ್ರೆಸ್ ನಡೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದರು.
ಪ್ರಧಾನಿ ರಾಜಿನಾಮೆ ಕೊಡಲಿ: ಚುನಾವಣೆ ನಡೆದ ಎಲ್ಲ ರಾಜ್ಯಗಳಲ್ಲಿ ನೆಲೆ ಕಳೆದುಕೊಳ್ಳುವ ಸ್ಥಿತಿ ತಲುಪಿರುವ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. ಜನತೆಯ ತೀರ್ಪು ಗೌರವಿಸಿ ಕೂಡಲೇ ಪ್ರಧಾನಿ ರಾಜಿನಾಮೆ ನೀಡಲಿ. ಕಾಂಗ್ರೆಸ್‌ಗೆ ನೈತಿಕತೆ ಇದ್ದರೆ ಕೂಡಲೇ ಲೋಕಸಭೆ ವಿಸರ್ಜಿಸಿ
ಚುನಾವಣೆ ಘೋಷಿಸಲಿ. ದೆಹಲಿಯಲ್ಲಿ ಕಳೆದ 15 ವರ್ಷಗಳ ಭದ್ರಕೋಟೆ ಛಿದ್ರವಾಗಿದೆ. ವಿರೋಧ ಪಕ್ಷವಾಗಿ ನಿಲ್ಲುವ ಅರ್ಹತೆಯನ್ನೂ ಕಾಂಗ್ರೆಸ್ ಕಳೆದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಬಿಜೆಪಿಯೊಂದೇ ಜನರ ಮುಂದಿರುವ ಪರ್ಯಾಯ ಆಯ್ಕೆ. ನರೇಂದ್ರ ಮೋದಿ ನಾಯಕತ್ವಕ್ಕೆ ಅಖಂಡ ಭಾರತದ ಬೆಂಬಲ ವ್ಯಕ್ತವಾಗಿದೆ ಎಂದರು.
ಬೈಕ್ ರ್ಯಾಲಿ: ಇದೇ ಸಂದರ್ಭದಲ್ಲಿ ಬಿಜೆಪಿಯ ತಾಲೂಕು, ನಗರ ಮತ್ತು ಯುವ ಘಟಕಗಳ ನೇತೃತ್ವದಲ್ಲಿ ಹತ್ತಾರು ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಸಂಭ್ರಮಿಸಿದರು. ಬಿಜೆಪಿ ಪರ ಘೋಷಣೆಗಳನ್ನು ಕೂಗುತ್ತಾ, ನರೇಂದ್ರ ಮೋದಿ ನಾಯಕತ್ವಕ್ಕೆ ದೊರೆತ ಅಖಂಡ ಜನಬೆಂಬಲ ಲೋಕಸಭೆಯಲ್ಲೂ ಪ್ರತಿಧ್ವನಿಸಲಿದೆ. ಸ್ವಾಭಿಮಾನಿ ಭಾರತೀಯರು ಭ್ರಷ್ಟಾಚಾರವನ್ನು ವಿರೋಧಿಸಿ ಮತ ನೀಡಿದ್ದಾರೆ ಎಂದರು.
ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪುಷ್ಪಾ ಶಿವಶಂಕರ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲ, ಬಿಜೆಪಿ ತಾಲೂಕು ಅಧ್ಯಕ್ಷ ಅಶ್ವತ್ಥನಾರಾಯಣಗೌಡ, ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಯುವ ಘಟಕದ ಅಧ್ಯಕ್ಷ ಶಿವಕುಮಾರ್, ಹಿರಿಯ ಮುಖಂಡ ಕೆ. ಮೋಹನಕುಮಾರ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement