ದುರಾಡಳಿತಕ್ಕೆ ಮತದಾರರ ತಕ್ಕ ಪಾಠ
ಸೂಲಿಬೆಲೆ: ಭಾರತದ ಐದು ರಾಜ್ಯಗಳಲ್ಲಿ ನಡೆದ ಚುನಾವಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮುಖೇನ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೊಸಕೋಟೆ ತಾ.ಬಿಜೆಪಿ ಅಧ್ಯಕ್ಷ ಸಿ. ಮನಿಯಪ್ಪ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣಿಗೆ ದಿಕ್ಸೂಚಿ ಎಂದೇ ಕರೆಯುತ್ತಿದ್ದ ಈ ಚುನಾವಣೆಯ ಫಲಿತಾಂಶ ದೇಶದಲ್ಲಿ ನರೇಂದ್ರ ಮೋದಿ ಹವಾ ತೋರಿಸುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಹಗರಣಗಳು, ಜನ ವಿರೋಧಿ ನೀತಿಗಳು, ಬೆಲೆ ಏರಿಕೆ ಇತ್ಯಾದಿಯಾಗಿ ದೇಶವನ್ನು ಆರ್ಥಿಕ
ದುಸ್ಥಿತಿಯತ್ತ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಜನ ಬೇಸತ್ತು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣಿಯಲ್ಲಿ ಬಿಜೆಪಿ ಸ್ವಷ್ಟ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಪಂದ ಮುಖಂಡರ ಸಭೆಯನ್ನು ನೆಲಮಂಗಲದ ರೆಸಾರ್ಟ ಒಂದರಲ್ಲಿ ಡಿ.9ರಂದು ಕರೆಯಲಾಗಿದ್ದು, ರಾಜ್ಯ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ.ಶಕ್ತಿ ಕೇಂದ್ರದ ಮುಖಂಡರು ಇದರಲ್ಲಿ ಭಾಗವಹಿಸಿ ಬಿಜೆಪಿ ಪಕ್ಷವನ್ನು ಬಲಪಡಿಸಬೇಕು ಎಂದು ಮುನಿಯಪ್ಪ ತಿಳಿಸಿದ್ದಾರೆ.