ಬಯಲು ಶೌಚಾಲಯ ಶಮನಕ್ಕೆ ಸಂಕಲ್ಪ
ಕ.ಪ್ರ.ವಾರ್ತೆ ರಾಮನಗರ ಡಿ.8
ಜಿಲ್ಲೆಯಲ್ಲಿರುವ 2.15 ಲಕ್ಷ ಕುಟುಂಬಗಳ ಪೈಕಿ ಕೇವಲ 58 ಸಾವಿರ ಕುಟುಂಬಗಳು ಮಾತ್ರವೇ ಶೌಚಾಲಯಗಳನ್ನು ಹೊಂದಿವೆ. ಎಲ್ಲಾ ಕುಟುಂಬಗಳೂ ಶೌಚಾಲಯ ಹೊಂದುವಂತೆ ಮಾಡಿ, ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಧನುಷ್ ತಿಳಿಸಿದರು.
ಕೇಂದ್ರ ಸರ್ಕಾರದ ವಾರ್ತಾ ಶಾಖೆಯು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಭಾರತ್ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನದ 2ನೇ ದಿನ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಫಾಸ್ಟ್ ಟ್ರ್ಯಾಕ್ ಯೋಜನೆ ಮೂಲಕ ಶೌಚಾಲಯ ನಿರ್ಮಾಣ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ.
ಒಂದು ಗ್ರಾಂ. ಮಲದಲ್ಲಿ ಒಂದು ಕೋಟಿ ವೈರಾಣುಗಳು, 10 ಲಕ್ಷ ರೋಗಾಣುಗಳು, ಒಂದು ಸಾವಿರ ಪರಾವಲಂಬಿ ರೋಗಾಣುಗಳು ಹಾಗೂ 100 ರೋಗಾಣುವಿನ ಮೊಟ್ಟೆಗಳು ಇರುತ್ತವೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯಲು ಪೂರಕ ವಾತಾವರಣ ಇದೆ.
ಯಾವುದೇ ಮಣ್ಣಿನಲ್ಲಾದರೂ ಸರಿ ಭಗವಾ ಅಥವಾ ಕೇಸರಿ ತಳಿ ನಾಟಿ ಮಾಡಿದರೆ 18 ತಿಂಗಳಲ್ಲಿ ಒಂದು ಎಕರೆ ಪ್ರದೇಶದಲ್ಲಿ ರು.10 ಲಕ್ಷದವರೆಗೆ ಲಾಭ ಗಳಿಸಬಹುದು ಎಂದು ಹಿರಿಯೂರು ತೋಟಗಾರಿಕೆ ಕಾಲೇಜಿನ ಪ್ರೊ.ಸುರೇಶ ತಿಳಿಸಿದರು.
ಜಿಲ್ಲೆಯ ಒಟ್ಟು ಕೃಷಿ ಪ್ರದೇಶದ ಪೈಕಿ 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಪ್ರದೇಶವಾಗಿದೆ. ಬೀಜ ಪೂರೈಕೆಯಿಂದ ಹಿಡಿದು ಮಾರುಕಟ್ಟೆವರೆಗೂ ತೋಟಗಾರಿಕೆ ಇಲಾಖೆಯು ಹಲವಾರು ಯೋಜನೆಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಜತೆಗೆ ಸರ್ಕಾರಿ ಯೋಜನೆಗಳ ಸದುಪಯೋಗ ಪಡಿಸಿಕೊಂಡರೆ ತೋಟಗಾರಿಕೆ ಕ್ಷೇತ್ರ ಲಾಭದಾಯಕವಾಗುತ್ತದೆ ಎಂದು ತೋಟಗಾರಿಕೆ ಉಪ ನಿರ್ದೇಶಕಿ ಡಾ.ಎಚ್.ಎನ್.ಹೇಮಾ ತಿಳಿಸಿದರು.
ಮಣ್ಣಿನ ಫಲವತ್ತತೆ ಕಡಿಮೆ: ಜಿಲ್ಲೆಯು 1.70 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಹಿಡುವಳಿ ಹೊಂದಿದೆ.
ರಸಗೊಬ್ಬರಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ಕ್ರಮೇಣ ಬರಡು ಭೂಮಿಯಾಗಿ ಪರಿವರ್ತನೆಯಾಗಲಿದೆ.
ಮಣ್ಣಿನ ಫಲವತ್ತತೆ ಸುಧಾರಿಸಿಕೊಂಡು, ನೀರು ಹಿಡಿದಿಟ್ಟುಕೊಳ್ಳಲು ಬದುಗಳ ನಿರ್ಮಾಣ ಮಾಡಬೇಕು.
ಇದಕ್ಕಾಗಿ ಸರ್ಕಾರ ಭೂ ಚೇತನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ತಿಳಿಸಿದರು.
ಜಿಲ್ಲೆಯಲ್ಲಿ 2.45 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನಾ ಗುರಿ ಹೊಂದಲಾಗಿದೆ. ನೀರಿನ ಮಿತ ಬಳಕೆ, ವ್ಶೆಜ್‌ಞಾನಿಕ ಬೇಸಾಯ ಪದ್ಧತಿ, ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಈ ಗುರಿ ಸಾಧಿಸಬಹುದಾಗಿದೆ.
ವೇಗವಾಗಿ ಬೆಳೆಯುವ ಜನ ಸಂಖ್ಯೆಗನುಗುಣವಾಗಿ ಆಹಾರ ಉತ್ಪಾದನೆಯನ್ನು ಮುಂದಿನ 20 ವರ್ಷಗಳಲ್ಲಿ ದ್ವಿಗುಣಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
2011ರಿಂದ ರಾಜ್ಯದ ಎಲ್ಲಾ ಗ್ರಾಮಗಳಿಗೆ ಹಂತ ಹಂತವಾಗಿ ಫ್ಲೋರೈಡ್ ಮುಕ್ತ ನೀರು ಸರಬರಾಜು ಮಾಡಲು ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಂಡು ಗ್ರಾಮಗಳ ಫ್ಲೋರೈಡ್ ಪ್ರಮಾಣವನ್ನು ಕಂಡು ಹಿಡಿಯಲಾಗುವುದು ಎಂದು ನೋಡಲ್ ಅಧಿಕಾರಿ ಅನಿಲ್‌ಕುಮಾರ್ ಹೇಳಿದರು.
ಫ್ಲೋರೈಡ್‌ಯುಕ್ತ ನೀರಿನಿಂದ ದಂತ ಹಾಗೂ ಮೂಳೆಗಳು ಸವೆದು ಅನಾರೋಗ್ಯಕ್ಕೆ ಕಾರಣವಾಗಲಿದೆ. ಜಿಲ್ಲೆಯನ್ನು ಫ್ಲೋರೈಡ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆ ಹಮ್ಮಿಕೊಳ್ಳಲಾಗಿದೆ. ಫ್ಲೋರೈಡ್‌ನಿಂದ ರೋಗಪೀಡಿತರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಿ ಕ್ಯಾಲ್ಷಿಯಮ್ ಮಾತ್ರೆಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷೀರ ಭಾಗ್ಯ ಹಾಗೂ ಬಿಸಿಯೂಟ ಯೋಜನೆಗಳ ಬಗ್ಗೆ ಸಹಾಯಕ ನಿರ್ದೇಶಕ ಶಂಕರಪ್ಪ ಮಾತನಾಡಿದರು.
ಕಾರ್ಯಾಗಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಇಲಾಖೆಗಳ ಮೂಲಕ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಸ್.ವೆಂಕಟೇಶ್ವರ್ ಸೇ ರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ಷೇತ್ರ ಪ್ರಸರಣಾಧಿಕಾರಿ ಪಿ.ಜಿ.ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.