ಮಡೆಸ್ನಾನ-ಪಂಕ್ತಿಭೇದ ಸಾಮಾಜಿಕ ಕಳಂಕ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಡಿ. 8
ಇಂದಿಗೂ ನಮ್ಮ ಸಮಾಜದಲ್ಲಿ ಬೆಂಬಿಡದೆ ಕಾಡುತ್ತಿರುವ ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿ, ಮೌಢ್ಯಗಳನ್ನು ನಿಷೇಧಿಸಬೇಕು. ವೈಚಾರಿಕತೆಯ ನೆಲೆಗಟ್ಟಿಗೆ ಸಿಗದ ಅತ್ಯಂತ ಅಮಾನವೀಯ ಸಾಮಾಜಿಕ ಕಳಂಕಗಳನ್ನು ತೊಡೆದುಹಾಕಲು ಸರ್ಕಾರ ಕೂಡಲೇ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಇಲ್ಲಿನ ಭಾರತೀಯ ಕಮ್ಯೂನಿಷ್ಟ್ ಪಕ್ಷ(ಮಾರ್ಕ್ಸ್ವಾದಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಭಾನುವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯತೆ ಅತ್ಯಂತ ಪ್ರಬಲವಾಗಿ ಬೇರು ಬಿಡುತ್ತಿದೆ. ಓಟ್ ಬ್ಯಾಂಕ್ ರಾಜಕಾರಣ ಜನರನ್ನು ಜಾತಿ-ಧರ್ಮಗಳ ಹೆಸರಿನಲ್ಲಿ ಒಡೆಯುತ್ತಲೇ ಇದೆ. ಅದನ್ನೂ ಮೀರಿ ಅನಿಷ್ಠ ಪದ್ಧತಿ ಸಂಪ್ರದಾಯದ ಹೆಸರಿನಲ್ಲಿ ಜನರನ್ನು ಅತ್ಯಂತ ಕ್ರೂರವಾಗಿ ಬೇರ್ಪಡಿಸಿ ಮೇಲು-ಕೀಳುಗಳೆಂಬ ವಿಷಬೀಜ ಬಿತ್ತುತ್ತಿವೆ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಧಾರ್ಮಿಕ ಕೇಂದ್ರಗಳು ಮೌಢ್ಯಾಚರಣೆಯ ವೇದಿಕೆಗಳಾಗುತ್ತಿವೆ ಎಂದು ಆರೋಪಿಸಿದರು.
ಪಂಕ್ತಿಭೇದ, ಮಡೆಸ್ನಾನದಂತಹ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ರಾಜ್ಯದಲ್ಲಿ 11 ಕಡೆ ಮಡೆಸ್ನಾನ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಬ್ರಾಹ್ಮಣರು ಉಂಡ ಎಂಜಲು ಎಲೆ ಮೇಲೆ ಕೆಳಜಾತಿಯ ಜನ ಹೊರಳಾಡುವ ಕೆಟ್ಟ ಸಂಸ್ಕೃತಿಯನ್ನು ಸಂಪ್ರದಾಯದ ಹೆಸರಿನಲ್ಲಿ ಆಚರಿಸುವ ವೈದಿಕಶಾಹಿಗೆ ಧಿಕ್ಕಾರವಿರಲಿ. ಚರ್ಮರೋಗಗಳು ವಾಸಿಯಾಗುವುದಾದರೆ ಬ್ರಾಹ್ಮಣರು ಕೆಳಜಾತಿಯ ಜನರು ತಿಂದ ಎಂಜಲು ಎಲೆ ಮೇಲೆ ಹೊರಳಾಡುವುದನ್ನು ಈ ವ್ಯವಸ್ಥೆಯಲ್ಲಿ ಊಹಿಸಲಾಗುತ್ತದೆಯೇ ಎಂಬುದನ್ನು ಆಲೋಚಿಸಬೇಕು. ಈ ಬಗೆಯ ಸಾಮಾಜಿಕ ಅಸಮಾನತೆ ತೊಲಗಿಸಲು ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಈ ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪೇಜಾವರರ ದ್ವಂದ್ವ: ಉಡುಪಿಯ ಪೇಜಾವರ ಶ್ರೀಗಳು ತಮ್ಮ ಅಧಿಪತ್ಯದಲ್ಲಿರುವ ಉಡುಪಿ ಕೃಷ್ಣ ಮಠದಲ್ಲಿರುವ ಪಂಕ್ತಿಭೇದವನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ಆದರೆ ನಾನು ಮಡೆಸ್ನಾನದ ವಿರೋಧಿ ಎಂದು ಹೇಳಿಕೆ ಕೊಡುತ್ತಾರೆ. ಉಡುಪಿಯಲ್ಲಿರುವ ಪಂಕ್ತಿಭೇದವನ್ನು ಎಲ್ಲರೂ ವಿರೋಧಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಮನುಷ್ಯರೂ ಸರಿಸಮಾನರೇ ಹೊರತು ಬ್ರಾಹ್ಮಣರು ಹೆಚ್ಚಲ್ಲ, ಕೆಳಜಾತಿಗಳು ಕಡಿಮೆಯಲ್ಲ ಎಂದರು.
ಮಾಧ್ಯಮಗಳಿಂದ ವೈಭವೀಕರಣ: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳೂ ಕೂಡ ಮೌಢ್ಯ ಮತ್ತು ಅಜ್ಞಾನವನ್ನು ವೈಭವೀಕರಣ ಮಾಡುತ್ತಿವೆ. ಜ್ಯೋತಿಷ್ಯ, ವಾಸ್ತು ಸೇರಿದಂತೆ ಅನೇಕ ವಿಚಾರಗಳಿಗೆ ಸಲ್ಲದ ಪ್ರಚಾರ ನೀಡುತ್ತಾ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿವೆ. ಕಂದಾಚಾರಗಳನ್ನೇ ವಿಜ್ಞಾನ ಎಂಬ ಕೆಟ್ಟ ಅರ್ಥದಲ್ಲಿ ಜನರ ಮೇಲೆ ಹೇರುವ ಹುನ್ನಾರಗಳು ನಡೆದಿರುವುದು ಖಂಡನೀಯ.
ಸರ್ಕಾರ ಕೂಡಲೇ ಕಾನೂನನ್ನು ಜಾರಿಗೆ ತರಬೇಕು. ಯಾರ ಒತ್ತಾಯ-ಒತ್ತಡ-ವಿರೋಧಗಳಿಗೂ ಮಣಿಯುವ ಅಗತ್ಯವಿಲ್ಲ. ಈ ಹಿನ್ನಲೆಯಲ್ಲಿ ಸಿಪಿಐ(ಎಂ) ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಭಾನುವಾರ ಏಕಕಾಲಕ್ಕೆ ಪ್ರತಿಭಟನೆ ನಡೆಸುತ್ತಿದೆ ಎಂದರು.