ಯೋಗ, ಧ್ಯಾನ ಶಿಬಿರ
ಚನ್ನಪಟ್ಟಣ: ಆರ್ಟ್ ಆಫ್ ಲೀವಿಂಗ್ ಸಂಸ್ಥೆಯು ಡಿ.11ರಿಂದ 15ರವರೆಗೆ 5 ದಿನಗಳ ಕಾಲ ಇಲ್ಲಿನ ಗುರುಕೃಪಾ ಕಟ್ಟಡದಲ್ಲಿ ಸುದರ್ಶನ ಕ್ರಿಯೆ, ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ರವಿಪ್ರಕಾಶ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ದಶಕಗಳಿಂದಲೂ ಹಿಂಸಾಮುಕ್ತ, ಒತ್ತಡ ರಹಿತ ಜಗತ್ತಿಗಾಗಿ ಸಂಸ್ಥೆಯು ಶ್ರಮಿಸುತ್ತಿದ್ದು, ಇದೀಗ ಆನಂದದ ಅಲೆಗಳು ಹೆಸರಿನಲ್ಲಿ ರಾಮನಗರ ಜಿಲ್ಲೆಯಾದ್ಯಂತ ಶಿಬಿರವನ್ನು ಹಮ್ಮಿಕೊಂಡು ಬರುತ್ತಿದೆ. ಇದರ ಅಂಗವಾಗಿ ಪಟ್ಟಣದಲ್ಲಿಯೂ ಶಿಬಿರ ನಡೆಸಲಾಗುತ್ತಿದೆ ಎಂದರು.
ಶಕ್ತಿಶಾಲಿಯಾದ ಉಸಿರಾಟ ಪ್ರಕ್ರಿಯೆಯನ್ನು ಮತ್ತು ಪರಸ್ಪರ ಸಂವಾದದ ಪ್ರಕ್ರಿಯೆಗಳನ್ನು ಕಾರ್ಯಾಗಾರದಲ್ಲಿ ಬೋಧಿಸಲಾಗುತ್ತದೆ ಇದರಿಂದ ದೇಹ ವ್ಯವಸ್ಥೆಯಲ್ಲಿರುವ ವಿಷಮಯ ಪದಾರ್ಥಗಳು ಹೊರಹಾಕಲ್ಪಟ್ಟು ಆರೋಗ್ಯಕರ ದೇಹ ಮತ್ತು ಸಂತೋಷದಿಂದಿರುವ ಮನಸ್ಸು ಸಿಗುತ್ತದೆ ಎಂದರು.
ಆರ್ಟ್ ಆಫ್ ಲೀವಿಂಗ್ನ ರವಿಕುಮಾರ್ ಗೌಡ ಮಾತನಾಡಿ, ಸಂಸ್ಥೆಯು 152 ದೇಶಗಳಲ್ಲಿ ಸುದರ್ಶನ ಕ್ರಿಯೆಯ ಮಹತ್ವವನ್ನು ಸಾರುತ್ತಾ ಬಂದಿದ್ದರೂ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಇದರ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಇಡೀ ರಾಜ್ಯದಲ್ಲಿ ಅರಿವು ಮೂಡಿಸಲು ಎಲ್ಲಾ ಶಾಖೆಗಳ ಪ್ರಮುಖರನ್ನು ನಿಯೋಜಿಸಿದ್ದು, ನಾಲ್ಕು ತಿಂಗಳ ಕಾಲ ವಾಸ್ತವ್ಯ ಹೂಡಿ ಈ ಕ್ರಿಯೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ತಂಡ ಮುಂದಾಗಲಿದೆ ಎಂದರು.
ಸಂಸ್ಥೆಯ ಶ್ರೀಕುಮಾರ್, ಕಿರಣ್, ವಿನಯ್, ಗಮಕ ಕಲಾಪರಿಷತ್ತಿನ ಗೋಪಾಲಕೃಷ್ಣ ಉಪಸ್ಥಿತರಿದ್ದರು.