ಶೋಷಣಿ ಮುಕ್ತ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ತ್ಯಾಗ: ಸುಶೀಲಮ್ಮ
ಸೂಲಿಬೆಲೆ: ಶೋಷಣಿ ಮುಕ್ತ ಸಮಾಜ ನಿರ್ಮಾಣಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಸೇವೆ ಮತ್ತು ತ್ಯಾಗದ ಮನೋಭಾವ ಎಷ್ಟು ತಲೆಮಾರು ಸವೆದರೂ ಶಾಶ್ವತವಾಗಿರುತ್ತದೆ. ಪ್ರತಿಯೊಂದು ಮಗುವ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಅಭ್ಯಸಿಸಬೇಕು ಎಂದು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಶೀಲಮ್ಮ ಹೇಳಿದ್ದಾರೆ. ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆ ಆವಣರದಲ್ಲಿ ಡಾ.ಅಂಬೇಡ್ಕರ್ 57ನೇ ಪರಿನಿರ್ವಾಣ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಸೂ.ರಂ ರಾಮಯ್ಯ ಮಾತನಾಡಿ, ದಲಿತರ ಉದ್ಘಾರಕ್ಕಾಗಿ ಅಂಬೇಡ್ಕರ್ ಇಡೀ ಜೀವನವನ್ನು ತ್ಯಾಗ ಮಾಡಿದರು. ಅನೇಕ ಕಷ್ಟಗಳನ್ನು ಅನುಭವಿಸಿ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ದಲಿತರ ಸಮಾನತೆಗಾಗಿ ಅನೇಕ ಕಾನೂನುಗಳನ್ನು ತಂದರು. ಆದರೇ ಇಂದಿಗೂ ದಲಿತರು ಉದ್ಧಾರವಾಗಿಲ್ಲ. ಶಿಕ್ಷಣ ವ್ಯಕ್ತಿತ್ವವನ್ನು ಬದಲಾವಣೆ ಮಾಡುತ್ತದೆ. ದಲಿತರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು ಎಂದರು.
ಉಪನ್ಯಾಸ ನೀಡಿದ ಎಸ್.ಮಹದೇವಯ್ಯ ಶಿಕ್ಷಣದಿಂದ ವ್ಯಕ್ತಿತ್ವ ಬದಲಾವಣೆ ಹೊಂದಲು ಸಾಧ್ಯ ಎಂದರು.ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡಿದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ಸ್ಥಳೀಯ ಅಂಬೇಡ್ಕರ್ ಯುವಕರ ಸಂಘದಿಂದ ಸಹಾಯಕ ನಿರ್ದೇಶಕಿ ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು. ಡಿ. ಲಕ್ಷ್ಮೀನಾರಾಯಣ್ ತಂಡದಿಂದ ಭಕ್ತಿಗಳು, ಬೆಟ್ಟಹಳ್ಳಿ ನರಸಿಂಹಯ್ಯ ಜನಪದ ಗೀತೆಗಳು ಗೀತಾ ಗಾಯನ ನಡೆಯಿತು.