ರಕ್ತದಾನ ಭಾವೈಕ್ಯತೆ ಬಿತ್ತಲು ಸಹಕಾರಿ
ದೊಡ್ಡಬಳ್ಳಾಪುರ: ಇಲ್ಲಿನ ಸಿಪಿಎಂ ಪಕ್ಷ ದೊಡ್ಡಬಳ್ಳಾಪುರ ತಾಲೂಕು ಘಟಕದ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಆರ್. ಚಂದ್ರತೇಜಸ್ವಿ ಉದ್ಘಾಟಿಸಿದರು. ಅವರು ಮಾತನಾಡಿ, ಅಂಬೇಡ್ಕರ್ ಈ ದೇಶದ ಭವಿಷ್ಯದ ಕುರಿತ ಸ್ಪಷ್ಟ ದಿಕ್ಸೂಚಿ. ಅವರ ಆಲೋಚನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ದೇಶ ಸೋಲುತ್ತಿದೆ.
ಭವಿಷ್ಯದ ಹಿತದೃಷ್ಟಿಯಿಂದ ದೇಶವನ್ನು ಜಾತಿವಾದಿಗಳಿಂದ ರಕ್ಷಿಸಬೇಕಿದೆ. ಸರ್ವಸಮಾನತೆ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧತೆ ತಂದುಕೊಡಬೇಕಿದೆ. ಇದು ಯುವಕರಿಂದ ಮಾತ್ರ ಸಾಧ್ಯ. ಹೀಗಾಗಿ ಯುವ ಮನಸ್ಸುಗಳು ಸಂಘಟಿತರಾಗಬೇಕು. ಪ್ರಜಾಪ್ರಭುತ್ವ ಆತಂಕಗಳಿಂದ ದೂರವಾದಾಗ ಮಾತ್ರ ಅಂಬೇಡ್ಕರ್‌ರ ಸಂವಿಧಾದ ಮೌಲ್ಯಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ರಕ್ತದಾನ ಶ್ರೇಷ್ಠವಾದ ದಾನ. ಇದರಲ್ಲಿ ಜಾತಿ, ಮತ, ಧರ್ಮ, ಲಿಂಗದ ತಾರತಮ್ಯವಿಲ್ಲ. ವ್ಯಕ್ತಿಗೆ ಕೊಡುವ ರಕ್ತ ಯಾವ ಜಾತಿಯದ್ದು ಎಂದು ಯಾರೂ ಆಲೋಚಿಸುವುದಿಲ್ಲ. ರಕ್ತದಾನ ವಿಶ್ವಾತ್ಮಕ ಮೌಲ್ಯಗಳ ಸಂಕೇತ. ನಾವೆಲ್ಲರೂ ಒಂದೇ ಎಂಬ ಸಾರ್ವತ್ರಿಕ ಭಾವನೆ ಬಿತ್ತಲು ರಕ್ತದಾನ ಸಾಂಕೇತಿಕ ಅರ್ಥದಲ್ಲಿ ಸಹಕಾರಿ ಎಂದರು.
ಸಿಪಿಎಂ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಅಂಜನಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ಬಿ.ಜಿ.ಹೇಮಂತರಾಜು, ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ, ನಗರಸಭಾ ಸದಸ್ಯ ರವಿಕುಮಾರ್, ದಲಿತ ಹಕ್ಕುಗಳ ಸಮಿತಿ ಉಪಾಧ್ಯಕ್ಷ ಟಿ. ಗಂಗಾಧರಪ್ಪ, ಮುಖಂಡ ಪಿ.ಎ.ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರಿನ ಲಯನ್ಸ್ ರಕ್ತನಿಧಿಯವರು ಸ್ವಯಂಪ್ರೇರಿತ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿದರು. ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನ ಹಲವು ಭಾಗಗಳಿಂದ ಬಂದಿದ್ದ ಹತ್ತಾರು ಯುವಕರು ರಕ್ತದಾನದಲ್ಲಿ ಪಾಲ್ಗೊಂಡರು. ರಕ್ತದಾನಿಗಳಿಗೆ ಹಣ್ಣು-ಹಂಪಲು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.