ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಪರಾಧಿಗಳೇ ಎಚ್ಚರಿಕೆಯಿಂದ ವರ್ತಿಸಿ

Vishwanath S
Updated On : 11 Dec 2013, 1:17 am

ಕ.ಪ್ರ.ವಾರ್ತೆ ,  ಆನೇಕಲ್ಲು ,  ಡಿ.10
ಜೀವನದಲ್ಲಿ ತಪ್ಪು ತಿದ್ದಿಕೊಂಡು ಸನ್ಮಾರ್ಗದಲ್ಲಿ ನಡೆದುಕೊಳ್ಳುವುದು ಸೂಕ್ತ. ಹಳೆಯ ಚಾಳಿಯನ್ನು ಮುಂದುವರಿಸಿಕೊಂಡು ಐಷಾರಾಮಿ ಜೀವನ ನಡೆಸಲು ಕನಸು ಕಾಣುತ್ತಿದ್ದರೆ ಕಾನೂನು ಕ್ರಮ ಅನುಭವಿಸಬೇಕಾಗುತ್ತದೆ.
-ಹೀಗೊಂದು ಕಡಕ್ ಎಚ್ಚರಿಕೆಯನ್ನು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿರುವ ಹಾಗೂ ರೌಡಿ ಶೀಟರ್ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ರವಾನಿಸಿದರು.
ಅವರು ಆನೇಕಲ್ ತಾಲೂಕಿನ 5 ಪೊಲೀಸ್ ಠಾಣಾ ವ್ಯಾಪ್ತಿಯ 100ಕ್ಕೂ ಹೆಚ್ಚು ರೌಡಿ ಪಟ್ಟಿಯಲ್ಲಿರುವವರನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿದರು. ಇನ್ನು ಮುಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಹಫ್ತಾ ವಸೂಲಿ, ಕರೆ ಮಾಡಿ ಬೆದರಿಸುವುದು, ಸಂಚು ಹೂಡಿ ಹಲ್ಲೆ ನಡೆಸುವುದು, ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿ ಗಲಭೆಗಳಿಗೆ ಪ್ರಚೋದನೆ ನೀಡುವುದು, ಅಮಾಯಕ ಪ್ರಜೆಗಳಿಗೆ ತೊಂದರೆ ನೀಡುವುದು ಸೇರಿದಂತೆ ಯಾವುದೇ ಘಟನೆ ಯಲ್ಲಿ ಭಾಗವಹಿಸಿರುವುದು ಕಂಡು ಬಂದಲ್ಲಿ ಕಾನೂನು ಕ್ರಮ ಅನುಭವಿಸಬೇಕಾಗುತ್ತದೆ ಎಂದರು.
ಒಮ್ಮೆಗೆ ಜೀವನದಲ್ಲಿ ಪರಿವರ್ತನೆ ಹೊಂದಿ ಸಮಾಜ ಮುಖಿಯಾಗಿ ನಡೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಹಳೆಯ ಚಾಳಿ ಮುಂದುವರಿಸಿದಲ್ಲಿ ಗಡೀಪಾರು ಶಿಕ್ಷೆ ನೀಡಲಾಗುವುದು. ಇದನ್ನು ಮೀರಿದರ ಗೂಂಡಾ ಕಾಯಿದೆಯಡಿ ಕ್ರಮ ನಡೆಸಲಾಗುವುದು ಎಂದರು.
ಕೆಲ ಅಪರಾಧಿಗಳು ಘಟನೆ ನಡೆದ ಹಿನ್ನೆಲೆ ವಿವರಿಸಿ ಇನ್ನು ಮುಂದೆ ಉತ್ತಮ ನಡತೆಯಿಂದ ಬಾಳಲು ಅವಕಾಶ ಮಾಡಿಕೊಡಿ. ಕಳೆದ ನಾಲ್ಕಾರು ವರ್ಷಗಳಿಂದ ನನ್ನ ಮೇಲೆ ಯಾವುದೇ ಪ್ರಕರಣ ಇಲ್ಲ ಎಂದು ಬೇಡಿಕೊಂಡಾಗ ಅವರ ಮನವಿಯನ್ನು ಆಲಿಸಿ ಹಿಂದಿನ ಪ್ರಕರಣಗಳ ಹಿನ್ನೆಲೆ ಮತ್ತು ನಂತರದ ನಡವಳಿಕೆ ತಿಳಿದು ಬಿಡುಗಡೆ ಮಾಡುವ ಭರವಸೆ ನೀಡಿದರು.
ಅಡಿಷನಲ್ ಎಸ್ಪಿ ಅಬ್ದುಲ್ ಅಹದ್ ರೌಡಿಗಳ ಪೆರೇಡ್ ನಡೆಸಿ ಠಾಣಾಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮಂತರ ಡಿವೈ ಎಸ್ಪಿ ಬಲರಾಮೇಗೌಡ, ವೃತ್ತ ನಿರೀಕ್ಷಕರಾದ ಕಿಶೋರ್, ಡಿ.ಎಸ್. ರಾಜೇಂದ್ರ, ಮಲ್ಲೇಶ್, ಪಿಎಸ್ಸೈ ಗಳಾದ ಶಶಿಧರ್, ಹನುಮಂತಪ್ಪ, ರಾಘವೇಂದ್ರ ಬೈಂದೂರು, ಚೇತನ್ ಕುಮಾರ್, ಪ್ರಕಾಶ್, ಫರೂಕ್ ಪಾಷಾ ಮತ್ತು ಸಿಬ್ಬಂದಿ ರೌಡ ಶೀಟರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement