ಪುಟ್ಟೇಗೌಡ ವಜಾ, ಹಂಗಾಮಿ ಸಮಿತಿ ಅಧ್ಯಕ್ಷ ಮಹದೇವ್
ಚನ್ನಪಟ್ಟಣ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ರಾಜಕಾರಣ ಮತ್ತೆ ಬಿರುಸು ಗೊಂಡಿದೆ. ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನದಿಂದ ಎಸ್.ಪಿ. ಪುಟ್ಟೇಗೌಡರನ್ನು ವಜಾಗೊಳಿಸಿ ನೂತನ ಹಂಗಾಮಿ ಸಮಿತಿ ಅಧ್ಯಕ್ಷರಾಗಿ ಮಹದೇವ್ರನ್ನು ಆಯ್ಕೆ ಮಾಡಲಾಗಿದೆ.
ಗುರುಭವನದಲ್ಲಿ ದೇವೇಗೌಡ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಧ್ಯಕ್ಷ ಎಸ್.ಪಿ.ಪುಟ್ಟೇಗೌಡ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪದಾಧಿಕಾರಿಗಳು ಅವರನ್ನು ವಜಾ ಗೊಳಿಸುವಂತೆ ಸರ್ವಾನುಮತದಿಂದ ಆಗ್ರಹಿಸಿದರು.
ಪುಟ್ಟೇಗೌಡ ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಒಂದು ವರ್ಷದಿಂದ ಶಿಕ್ಷಕರ ಸಂಘದ ಸಭೆ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದ್ದು ತ್ವರಿತವಾಗಿ ಅಡಾಕ್ ಸಮಿತಿಯನ್ನು ರಚನೆ ಮಾಡಿ ಮಹದೇವ್ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಜಾನಪದ ಲೋಕದಲ್ಲಿ ಮಕ್ಕಳ ಹಬ್ಬ
ರಾಮನಗರ: ಧಾರವಾಡದ ರಾಜ್ಯ ಬಾಲವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ನಿಂದ ಡಿ.13ರ ಬೆಳಗ್ಗೆ 11ಕ್ಕೆ ನಗರದ ಜಾನಪದ ಲೋಕದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್, ಶಾಸಕರಾದ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್, ಎಚ್.ಸಿ. ಬಾಲಕೃಷ್ಣ, ಕೆ.ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಎಂ.ವಿ.ರಾಜಶೇಖರನ್, ಪುಟ್ಟಣ್ಣ, ಇ.ಕೃಷ್ಣಪ್ಪ, ಸೈಯದ್ ಮದೀರ್ ಆಗಾ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ರಾಮನಗರ ತಾ.ಪಂ. ಅಧ್ಯಕ್ಷೆ ಲಕ್ಷ್ಮಿಮಂಜುನಾಥ್ ಭಾಗವಹಿಸುವರು.
ಅರ್ಜಿಆಹ್ವಾನ
ರಾಮನಗರ: ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಟ್ರೈನಿಂಗ್ ಡಿಪಾರ್ಟ್ಮೆಂಟ್ನಿಂದ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಏ.2014ನೇ ಬ್ಯಾಚ್ಗೆ ಶಿಶಿಕ್ಷು(ಅಪ್ರೆಂಟಿಸ್) ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್ (ಎಂಎಂವಿ), ಪಸಾ, ಕೋಪಾ, ಕಾರ್ಪೆಂಟರ್, ಶೀಟ್ಮೆಟಲ್ ವರ್ಕರ್ ವೃತ್ತಿಗಳಲ್ಲಿನ ಐಟಿಐ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ತೇರ್ಗಡೆಯಾಗಿರಬೇಕು. ತರಬೇತಿಯ ಅವಧಿಯು 1 ಮತ್ತು 2 ವರ್ಷಗಳಾಗಿದ್ದು, ತರಬೇತಿ ವೇಳೆ ರು.2400 ಮತ್ತು ರು.2800 ರವರೆಗೆ ವೃತ್ತಿಗನುಗುಣವಾಗಿ ಭತ್ಯೆ ನೀಡಲಾಗುವುದು. ಕಂಪೆನಿಯ ನಿಯಮಾನುಸಾರ ವೈದ್ಯಕೀಯ ಅರ್ಹತೆ ಇರುತ್ತದೆ. ಅರ್ಜಿ ನಮೂನೆಗಳನ್ನು ರಾಮನಗರದ ಕಂದಾಯ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಡಿ.24ರೊಳಗೆ ಸದರಿ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಸಲಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಎಸ್.ಜೆ.ಹೇಮಚಂದ್ರ ತಿಳಿಸಿದ್ದಾರೆ.
ಕುಂದು ಕೊರತೆ ಸಭೆ
ರಾಮನಗರ: ರಾಮನಗರ ತಾಲೂಕಿನ ವ್ಯಾಪ್ತಿಯ ಪರಿಶಿಷ್ಟ ಜಾತಿ, ವರ್ಗದವರ ಕುಂದು ಕೊರತೆಯ ಸಭೆಯನ್ನು ಡಿ.20ರ ಬೆಳಗ್ಗೆ 11ಕ್ಕೆ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಕರೆಯಲಾಗಿದೆ. ತಾಲೂಕಿನ ಆಸಕ್ತ ಸಂಘ-ಸಂಸ್ಥೆಗಳ ಮುಖ್ಯಸ್ಥರು, ದಲಿತ ಮುಖಂಡರು ಸಭೆಯಲ್ಲಿ ಹಾಜರಾಗಿ ಸಲಹೆ-ಸೂಚನೆಗಳನ್ನು ನೀಡಬೇಕೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮಾಯೀಗೌಡರಿಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ
ಚನ್ನಪಟ್ಟಣ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ಕೆ.ಎಂ. ಮಾಯೀಗೌಡರಿಗೆ ಬೆಂಗಳೂರಿನ ಕನ್ನಡ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಣ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕಳೆದೆರಡು ದಶಕಗಳಿಗೂ ಹೆಚ್ಚುಕಾಲ ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡುತ್ತಿರುವ ಕೊಡುಗೆನ್ನು ಸ್ಮರಿಸಿದ ಪ್ರತಿಷ್ಠಾನವು ಅವರಿಗೆ ಪ್ರಶಸ್ತಿ ನೀಡಿದೆ. ಡಿ.11ರಂದು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ನಡೆಯಲಿರುವ ಕರ್ನಾಟಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾಯೀಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವುದಾಗಿ ಪ್ರತಿಷ್ಠಾನದ ಅಧ್ಯಕ್ಷ ಪ್ರವೀಣ್ ಕುಮಾರ್.ಎನ್.ರಾವ್ ತಿಳಿಸಿದ್ದಾರೆ.
ಕಲಬೆರಕೆ ಹಾಲಿನ ಮಾಹಿತಿಗಾಗಿ
ಕನ್ನಡಪ್ರಭಕ್ಕೆ ಧನ್ಯವಾದ: ಸೋಮಣ್ಣ
ದೇವನಹಳ್ಳಿ: ಇತರ ರಾಜ್ಯಗಳಿಂದ ನಮ್ಮ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಕಲಬೆರೆಕೆ ಹಾಲಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ ಕನ್ನಡಪ್ರಭ ಪತ್ರಿಕೆಗೆ ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕರಾದ ಎ.ಸೋಮಣ್ಣ ಮಂಗಳವಾರ ಧನ್ಯವಾದ ಅರ್ಪಿಸಿದರು.
ರಾಜ್ಯದಲ್ಲಿ ಪ್ರತಿ ದಿನ 50 ಸಾವಿರದಿಂದ ಒಂದು ಲಕ್ಷ ಲೀಟರ್ ಕಲಬೆರಕೆ ಹಾಲು ಮಾರಾಟವಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದರೂ ಕಣ್ಣುಮುಚ್ಚಿಕೊಂಡಿದೆ. ಇಂತಹ ಹಾಲನ್ನು ತಯಾರಿಸದವರ, ಮಾರಾಟಗಾರರ ಮೇಲೂ ಮತ್ತು ತಿಳಿದು ತಿಳಿಯದಂತೆ ಬಳಕೆ ಮಾಡುತ್ತಿರುವ ಹೊಟೇಲ್ ಮಾಲೀಕರ ಮೇಲೆ ಸರ್ಕಾರ ಕಾನೂನಿನ ಕ್ರಮ ಜರುಗಿಸಬೇಕು. ಅಲ್ಲದೆ ಹೊರ ರಾಜ್ಯಗಳಿಂದ ಸರಬರಾಜಾಗುತ್ತಿರುವ ಎಲ್ಲ ಹಾಲನ್ನು ನಿಷೇಧಿಸಬೇಕು ಎಂದು ತಿಳಿಸಿ ಈ ರೀತಿಯ ಕಲಬೆರಕೆ ಹಾಲಿನ ಬಗ್ಗೆ ಜನತೆಗೆ ಪತ್ರಿಕೆ ಮೂಲಕ ಮಾಹಿತಿ ದೊರೆತ್ತದ್ದರಿಂದ ಉತ್ತಮ ಗುಣಮಟ್ಟದ ನಂದಿನಿ ಹಾಲನ್ನು ಉಪಯೋಗಿಸಲು ಜನರು ಮುಂದಾಗುವುದರಲ್ಲಿ ಸಂಶಯವಿಲ್ಲ ಎಂದರು.
ಆಹಾರ ಪದಾರ್ಥ ವಹಿವಾಟು; ನೋಂದಣಿ ಕಡ್ಡಾಯ
ರಾಮನಗರ: ಆಹಾರ ಪದಾರ್ಥಗಳ ವಹಿವಾಟುದಾರರ ನೋಂದಣಿ ಕಡ್ಡಾಯವಾಗಿದ್ದು, ನೋಂದಣಿಗೆ ಮುಂದಿನ ಫೆ.4 ಕಡೆಯ ದಿನವಾಗಿದೆ. ನೋಂದಣಿ ಮಾಡಿಸದೆ ಆಹಾರ ಪದಾರ್ಥಗಳ ವಹಿವಾಟು ನಡೆಸುವವರಿಗೆ ರು.5 ಲಕ್ಷ ದಂಡ, 6 ತಿಂಗಳ ಸಜೆ ವಿಧಿಸಬಹುದಾಗಿದೆ. ಕೇಂದ್ರ ಸರ್ಕಾರವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯನ್ನು 2 ವರ್ಷದಿಂದ ಜಾರಿಗೆ ತಂದಿದೆ. ಈ ಕಾಯ್ದೆಯನ್ವಯ ಆಹಾರ ವಸ್ತುಗಳ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ ನಿಯಂತ್ರಣ 2011ರ ಕಲಂ 3.1 ಅಡಿಯಲ್ಲಿ ಪರವಾನಗಿ ಇಲ್ಲದೇ ಯಾವುದೇ ವ್ಯಕ್ತಿಯು ಆಹಾರ ವಸ್ತುಗಳ ಯಾವುದೇ ವ್ಯವಹಾರ ಪ್ರಾರಂಭಿಸುವಂತಿಲ್ಲ.
ಹೀಗಾಗಿ ರಾಮನಗರ ಜಿಲ್ಲೆಯ 4 ತಾಲೂಕುಗಳಲ್ಲಿನ ಆಹಾರ ತಯಾರಕರು, ಮಾರಾಟಗಾರರು, ವಿತರಕರು, ದಾಸ್ತಾನುದಾರರು, ರೀ ಪ್ಯಾಕಿಂಗ್ದಾರರು, ರಫ್ತುದಾರರು, ಈ ಕಾಯ್ದೆಯಡಿಗೆ ಬರುತ್ತಾರೆ. ಅವರೆಲ್ಲ ನೋಂದಣಿ ಮತ್ತು ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧೀನದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಪ್ರಕಟಣೆ ತಿಳಿಸಿದೆ.
ವ್ಯಾಪ್ತಿಗೊಳಪಡುವವರು: ಎಲ್ಲಾ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್ಗಳು, ಸಗಟು ವ್ಯಾಪಾರಿಗಳು, ವಿತರಕರು ಮತ್ತು ಮಾರಾಟಗಾರರು ಈ ಕಾಯ್ದೆಯಡಿ ಬರುತ್ತಾರೆ. ಎಲ್ಲಾ ಹೊಟೇಲ್, ರೆಸ್ಟೋರೆಂಟ್ಗಳು, ಕ್ಲಬ್, ಕ್ಯಾಂಟೀನ್, ಕ್ಯಾಟರಿಂಗ್ ವ್ಯವಹಾರ ಮಾಡುವವರು, ಎಲ್ಲಾ ಆಹಾರ ವಸ್ತುಗಳ ಸಾಗಾಣೆದಾರರು, ಆಹಾರ ಉಗ್ರಾಣ ಸಂಘಟನೆಗಳೂ ಈ ವ್ಯಾಪ್ತಿಗೆ ಸೇರುತ್ತವೆ. ಆಹಾರ ಸಂಸ್ಕರಣಾ ಘಟಕಗಳು, ಎಲ್ಲಾ ರೀತಿಯ ಆಹಾರ ವಸ್ತುಗಳ ಆಮದುದಾರರು, ಶೇಕಡ 100 ಆಹಾರ ವಸ್ತುಗಳ ರಫ್ತು ಘಟಕಗಳು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗಿದೆ.
ಪ್ರತಿಭಾ ಪುರಸ್ಕಾರ
ನೆಲಮಂಗಲ: ಪಟ್ಟಣದ ತಾಲೂಕು ಕಚೇರಿ ಮುಂಭಾಗ ಡಿಸೆಂಬರ್ 13ರ ಶುಕ್ರವಾರದಂದು ಬೆಳಿಗ್ಗೆ 11-30ಕ್ಕೆ ಕರ್ನಾಟಕ ರಾಜ್ಯ ದಲಿತ ಕೂಲಿ ಮತ್ತು ಕಾರ್ಮಿಕರ ಸಂಘಟನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯೋಜನೆಯೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ 7ನೇ ವರ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದಲ್ಲಿ 12-13ನೇ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ.85 ರಷ್ಟು ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮಾಂತರ ಮಟ್ಟದ ಕಲಾ ಸೌರಭ ಕಾರ್ಯಕ್ರಮದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.