ನಮ್ಮಿಂದ ಮುಂದಿನ ಪೀಳಿಗೆಗೆ ಅನ್ಯಾಯ
ರಾಮನಗರ: ನಮ್ಮ ಪೂರ್ವಿಕರು ನಮಗಾಗಿ ಹೇರಳ ಪ್ರಾಕೃತಿಕ ಸಂಪತ್ತು, ಉತ್ತಮ ಪರಿಸರ ಬಿಟ್ಟು ಹೋಗಿದ್ದಾರೆ. ನಾವೀಗ ಅವೆರಡನ್ನೂ ನಾಶಪಡಿಸುತ್ತಾ ನಮ್ಮ ಮುಂದಿನ ತಲೆಮಾರಿಗೆ ಘೋರ ಅನ್ಯಾಯ ಎಸಗುತ್ತಿದ್ದೇವೆ. ಇದೂ ಸಹ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ವಿಷಾದಿಸಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದಿಂದ ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಾನವ ಹಕ್ಕುದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾ ಕೃತಿಕ ಸಂಪತ್ತಿನ ನಾಶ ತಡೆಯದಿದ್ದರೆ ಮನುಕುಲದ ವಿನಾಶ ಖಚಿತ ಎಂದು ಎಚ್ಚರಿಸಿದರು.
ಕಲ್ಲು ಗಣಿಗಾರಿಕೆಯಿಂದ ಬೆಟ್ಟ-ಗುಡ್ಡಗಳು ಕರಗಿದ್ದರೆ, ಮರಳುಗಾರಿಕೆಯಿಂದ ಅಂತರ್ಜಲ ಕುಸಿದಿದೆ. ಕಾಡಿನ ನಾಶದಿಂದ ವನ್ಯ ಜೀವಿಗಳು ನಾಡಿಗೆ ದಾಂಗುಡಿಯಿಡುತ್ತಿವೆ. ಮಾನವನ ದುರಾಸೆಯಿಂದಾಗಿಯೇ ಜಾಗತಿಕ ತಾಪಮಾನ ಸಹಿತ ಪ್ರಾಕೃತಿಕ ವಿಕೋಪ ಎದುರಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ವ್ಯವಸ್ಥೆಯ ಪರಿಣಾಮ: ಅಮೆರಿಕಾದ ಅಧ್ಯಕ್ಷ ಅಬ್ರಾಹಂ ಲಿಂಕನ್, ಭಾರತ ಸಂವಿಧಾನದ ಪಿತಾಮಹಾ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವ್ಯವಸ್ಥೆ ಅನಾಗರಿಕತೆಯಿಂದ ನಡೆಸಿಕೊಂಡ ಪರಿಣಾಮವೇ ಅವರು ಮಹಾನ್ ವ್ಯಕ್ತಿಗಳಾಗಿ ರೂಪುಗೊಳ್ಳಲು ಕಾರಣವಾಯಿತು ಎಂದು ವಿಶ್ವನಾಥ್ ಬಣ್ಣಿಸಿದರು.
ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿ ಅನುಸರಿಸಿ ಮಹಾತ್ಮ ಗಾಂಧೀಜಿ ರೈಲಿನಿಂದ ಹೊರ ಬಬ್ಬಲಾಯಿತು. ಆ ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದ ಗಾಂಧೀಜಿ ಅವರು ವರ್ಣಬೇಧ ನೀತಿ ವಿರುದ್ಧ ಹೋರಾಡಿದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾನ್ ವ್ಯಕ್ತಿಯಾದರು ಎಂದು ಅವರು ವಿವರಿಸಿದರು.
ಬುದ್ಧ, ಬಸವ ಸೇರಿದಂತೆ ಅನೇಕ ವಚನಕಾರರು ಸಹ ತಮ್ಮ ಸಾಹಿತ್ಯದ ಮೂಲಕ ಶತಮಾನಗಳ ಹಿಂದೆಯೇ ಸಮಾಜದ ಸಮಾನತೆ, ಪರಿವರ್ತನೆಗಾಗಿ ಹೋರಾಟ ನಡಸಿದರು. ಅವರೆಲ್ಲರ ಪ್ರಯತ್ನವೂ ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವುದೇ ಆಗಿತ್ತು. ಮಹನೀಯರು ತಮ್ಮ ಹೋರಾಟ, ವಿಚಾರ, ಆದರ್ಶಗಳಿಂದ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದರು.
ಮೂರು ಬಗೆ ಹಕ್ಕುಗಳು: ಮಾನವ ಹಕ್ಕುಗಳಲ್ಲಿ ಮೂರು ಬಗೆಯನ್ನು ನಾವು ಕಾಣಬಹುದಾಗಿದೆ. ಅವು ಸಂವಿಧಾನತ್ಮಾಕ ಮಾನವ ಹಕ್ಕುಗಳು, ಅಂತಾರಾಷ್ಟ್ರೀಯ ಒಡಂಬಡಿಕೆಯ ಮೂಲಕ ಬಂದಿರುವ ಮಾನವ ಹಕ್ಕುಗಳು ಹಾಗೂ ನಮ್ಮ ಭಾರತದ ಸಂಸ್ಕೃತಿ ಮತ್ತು ಧರ್ಮ ಪರಂಪರೆಯ ಮೂಲಕ ಬಂದಿರುವ ಮಾನವ ಹಕ್ಕುಗಳಾಗಿವೆ ಎಂದು ವಿಶ್ವನಾಥ್ ತಿಳಿಸಿದರು.
ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅದರ ವಿರುದ್ಧ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿರುವುದನ್ನು ನಮ್ಮ ಚರಿತ್ರೆ ಸಾರಿ ಹೇಳುತ್ತದೆ. ಪರಿಸರದ ಮೇಲಿನ ದಾಳಿಯಿನ್ನೂ ಮಾನವ ಹಕ್ಕು ಉಲ್ಲಂಘನೆ ಪಟ್ಟಿಗೆ ಸೇರಿಲ್ಲವಾದರೂ ಮುಂದೊಂದು ದಿನ ಅದಕ್ಕೆ ಇನ್ನಿಲ್ಲದ ಮಹತ್ವ ನೀಡಲೇಬೇಕಾಗುತ್ತದೆ ಎಂದು ಹೇಳಿದರು.
ಕಸಿಯುವುದು ಅಪರಾಧ: ಇನ್ನೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವುದೂ ಅಪರಾಧವಾಗಿದೆ. ಪ್ರತಿಯೊಬ್ಬರೂ ತಮಗೆ ಸಿಗಬೇಕಾದ ಗೌರವ ಮತ್ತು ಹಕ್ಕುಗಳನ್ನು ಪಡೆಯುವುದು ಕರ್ತವ್ಯವಾಗಿದೆ. ಮಾನವ ಹಕ್ಕುಗಳ ರಕ್ಷಣೆಗೆ ವಿಧೇಯಕ ರೂಪಿಸಿ, ಕಾಯ್ದೆ ಜಾರಿಗೊಳಿಸಿದ್ದರೂ ಉಲ್ಲಂಘನೆ ಆಗುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್ ವಿಷಾದಿಸಿದರು.
ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ಅಲ್ಲಿನ ಕಾನೂನಿನ ಚೌಕಟ್ಟಿನಡಿಯಲ್ಲಿ ಜೀವಿಸುವ ಹಕ್ಕು, ರಕ್ಷಣೆಯ ಹಕ್ಕು, ಸಮಾನತೆಯ ಹಕ್ಕು, ಹೆಸರು ಮತ್ತು ರಾಷ್ಟ್ರೀಯತೆ ಪಡೆಯುವ ಹಕ್ಕು, ಧಾರ್ಮಿಕ ಹಕ್ಕು, ಆರೋಗ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಜೀತ ಪದ್ಧತಿಯ ನಿರ್ಮೂಲನಾ ಹಕ್ಕುಗಳನ್ನು ಮೂಲಭೂತವಾಗಿ ನೀಡಲಾಗಿದೆ. ಇವುಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದರು.
ಆಜನ್ಮ ಸಿದ್ಧ ಹಕ್ಕು: ಮಾನವ ಹಕ್ಕಗಳು ಮನುಷ್ಯನ ವ್ಯಕ್ತಿತ್ವದಲ್ಲೇ ಅಡಗಿರುವಂತಹ ಮೂಲಭೂತ ಹಕ್ಕುಗಳಾಗಿವೆ. ಈ ಮೂಲಭೂತ ಹಕ್ಕುಗಳನ್ನು ಪ್ರತಿಯೊಬ್ಬ ಭಾರತೀಯನಿಗೂ ನೀಡುವಂತೆ ಸಂವಿಧಾನ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರತಿಯೊಬ್ಬ ನಾಗರಿಕನು ನೆಮ್ಮದಿ, ಗೌರವಯುತ, ಘನತೆಯಿಂದ ಈವನ ನಡೆಸುವಂತಾಗಬೇಕು ಎನ್ನುವ ಆಜನ್ಮ ಸಿದ್ಧ ಹಕ್ಕನ್ನು ಭಾರತ ನೆಲದಲ್ಲಿ ನೀಡಲಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ವಕೀಲ ಚಾಂದ್ ಪಾಷಾ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಲಿಂಗರಾಜು, ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಮಹಮದ್ ಹನೀಫ್, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್.ಹೊಸಗೌಡರ ಮತ್ತಿತರರು ಭಾಗವಹಿಸಿದ್ದರು.