ರೇಲ್ವೆ ಸೇತುವೆ ನಿರ್ಮಾಣ: ಕೇಂದ್ರ ಸಚಿವ ಖರ್ಗೆಗೆ ಸಂಸದ ಸುರೇಶ್ ಮನವಿ
ಚನ್ನಪಟ್ಟಣ: ಪಟ್ಟಣದ ಎಲೆಕೇರಿ ಈ ಮೂಲಕ ಹಾಯ್ದು ಹೋಗುವ ಗ್ರಾಮಗಳ ಜನತೆಗೆ ರೇಲ್ವೆ ಗೇಟ್ ಬಹುದೊಡ್ಡ ಸಮಸ್ಯೆಯಾಗಿದ್ದು ಇದಕ್ಕೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ತ್ವರಿತವಾಗಿ ಈ ಮಾರ್ಗದಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಿಸುವಂತೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಸದ ಡಿ.ಕೆ.ಸುರೇಶ್ ಒತ್ತಾಯಿಸಿದ್ದಾರೆ. ದೆಹಲಿಯ ರೈಲ್ವೆ ಭವನದಲ್ಲಿ ಸಚಿವರನ್ನು ಭೇಟಿ ಮಾಡಿದ ಡಿ.ಕೆ.ಸುರೇಶ್, ಈ ಮೂಲಕ ಹತ್ತಾರ ಗ್ರಾಮಗಳಿಗೆ ಸಂಪರ್ಕಕಲ್ಪಿಸುವ ರಸ್ತೆ ಹಾಯ್ದು ಹೋಗಿದ್ದು, ಪಟ್ಟಣಕ್ಕೆ ಬರಲು ಈಭಾಗದ ಜನತೆ ರೈಲ್ವೆ ಗೇಟ್ ಬಳಿ ತಾಸುಗಟ್ಟಲೆ ಕಾಯುವಂತಾಗಿದೆ. ಈ ಭಾಗದ ಸಾರ್ವಜನಿಕರು ಹಲವಾರು ವರ್ಷಗಳಿಂದ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದು ಇನ್ನಾದರೂ ಇಲಾಖೆ ಗಮನ ಹರಿಸ ಬೇಕೆಂದು ಕೋರಿದರು.
ಸಮಸ್ಯೆ ಮನವರಿಕೆ: ಬೆಂಗಳೂರಿನಿಂದ ಶೆಟ್ಟಿಹಳ್ಳಿ ವರೆಗೆ ಜೋಡಿ ರೈಲುಮಾರ್ಗವಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಸೇಂಜರ್ ಮತ್ತು ಸರಕು ಸಾಗಾಣಿಕಾ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಈ ಭಾಗದ ಸಾರ್ವಜನಿಕರಿಗೆ ಎಲೇಕೇರಿ ಗೇಟ್ಬಳಿ ಗಂಟೆಗಟ್ಟಲೆ ಕಾಯ್ದು ನಿಲ್ಲುವಂತಾಗಿದೆ ಎಂದು ಸಚಿವರಿಗೆ ಸಮಸ್ಯೆ ಮನವರಿಕೆ ಮಾಡಿ ಕೊಟ್ಟರು. ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.