ಲೋಕಾಯುಕ್ತ ಬಲೆಗೆ ಗೃಹ ಮಂಡಳಿ ಗುಮಾಸ್ತ
ರಾಮನಗರ: ಖಾತೆ ಮಾಡಿಕೊಡಲು ನಿವೇಶನ ಮಾಲೀಕರೊಬ್ಬರಿಂದ ರು.500 ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕ ಗೃಹ ಮಂಡಳಿ ಗುಮಾಸ್ತನೊಬ್ಬ ಶುಕ್ರವಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಸಂಸ್ಥೆಯ ರಾಮನಗರ ಕಚೇರಿ ಗುಮಾಸ್ತ ಶ್ರೀನಿವಾಸ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ವ್ಯಕ್ತಿ. ಆತ ಕಾರ್ತಿಕ್ ತ್ಯಾಗರಾಜ್ ಎಂಬುವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಅನಿಲ್ ಅವರಿಗೆ ಲಂಚದ ಹಣ ಸಮೇತ ಸಿಕ್ಕಿಬಿದ್ದಿದ್ದಾನೆ.
ಖಾತೆ ಮಾಡಿಕೊಡುವ ವಿಷಯವಾಗಿ ಗುಮಾಸ್ತ ಶ್ರೀನಿವಾಸ, ನಿವೇಶನದಾರ ಕಾರ್ತಿಕ್ ತ್ಯಾಗರಾಜ್ ಅವರಿಂದ ರು.1 ಸಾವಿರ ಲಂಚಕ್ಕೆ ಪೀಡಿಸಿದ್ದ. ಈ ಬಗ್ಗೆ ಕಾರ್ತಿಕ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ಕಾರ್ತಿಕ್ ಸಹ ಮಂಡಳಿ ಕಚೇರಿಗೆ ತೆರಳಿ ಶ್ರೀನಿವಾಸನಿಗೆ ಲಂಚದ ಹಣ ನೀಡುತ್ತಿದ್ದಾಗ ದಾಳಿ ನಡೆದಿದೆ. ಆರೋಪಿ ಶ್ರೀನಿವಾಸನನ್ನು ಬಂಧಿಸಿದ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು,ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.